ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
–ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಮೂಲಕ ತನ್ನ ಜೊತೆ ಮಾತನಾಡಿದ್ದು, ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬುಧವಾರ ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿದೆ.
ಈ ಸಂಬಂಧ ವಿದೇಶಾಂಗ ಸಚಿವಾಲಯವು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮೋದಿ ಮತ್ತು ಟ್ರಂಪ್ ನಡುವೆ ನಿನ್ನೆ(ಬುಧವಾರ) ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಹೇಳಿದೆ.
ಬುಧವಾರ ಶ್ವೇತಭವನದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಉಕ್ರೇನ್ ಯುದ್ಧದ ವಿಷಯದಲ್ಲಿ ರಷ್ಯಾವನ್ನು ಪ್ರತ್ಯೇಕಿಸುವ ಯತ್ನದಲ್ಲಿ ಇದು ದೊಡ್ಡ ಹೆಜ್ಜೆ ಎಂದು ಹೇಳಿದ್ದರು.
ಭಾರತವು ರಷ್ಯಾದ ಕಚ್ಚಾ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕಳವಳ ವ್ಯಕ್ತಪಡಿಸಿರುವುದಾಗಿಯೂ ಟ್ರಂಪ್ ಹೇಳಿದ್ದರು,
ಭಾರತವು ತೈಲ ಖರೀದಿಸುತ್ತಿರುವುದರಿಂದ ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸು ಸಹಾಯವಾಗುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ.
ಟ್ರಂಪ್ ಅವರ ಹೆಸರನ್ನು ನೇರ ಉಲ್ಲೇಖಿಸದೆ ಈ ಹಿಂದಿನ ಹೇಳಿಕೆಯನ್ನು ಪುನರುಚ್ಛರಿಸಿದ ವಿದೇಶಾಂಗ ಸಚಿವಾಲಯವು, ಭಾರತದ ತೈಲ ಖರೀದಿಯು ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಹೇಳಿದೆ.
ಸ್ಥಿರ ಇಂಧನ ಬೆಲೆಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸರಬರಾಜುಗಳನ್ನು ಸುರಕ್ಷಿತಗೊಳಿಸುವುದು ಭಾರತದ ಇಂಧನ ನೀತಿಯ ಅವಳಿ ಉದ್ದೇಶಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ದೇಶಕ್ಕೆ ಅಗತ್ಯವಿರುವ ಮೂರನೇ ಒಂದು ಭಾಗದಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕ ತನ್ನ ಒತ್ತಡವನ್ನು ತೀವ್ರಗೊಳಿಸಿದೆ. ಭಾರತ ತೈಲ ಖರೀದಿ ನಿಲ್ಲಿಸಿದರೆ ರಷ್ಯಾಗೆ ಹಣಕಾಸು ಸಮಸ್ಯೆಯಾಗಲಿದ್ದು, ಆ ಮೂಲಕ ಉಕ್ರೇನ್ ವಿರುದ್ಧದ ಯುದ್ಧ ಅಂತ್ಯಗೊಳಿಸಬಹುದು ಎಂಬುದು ಅಮೆರಿಕದ ಲೆಕ್ಕಾಚಾರವಾಗಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.