ನರೇಂದ್ರ ಮೋದಿ, ಪ್ರಧಾನಿ (ಸಂಗ್ರಹ ಚಿತ್ರ)
– ಪಿಟಿಐ ಚಿತ್ರ
ನವದೆಹಲಿ: ‘ಎಎಪಿ ಸರ್ಕಾರ ರಾಜಧಾನಿಯಲ್ಲಿ ಕೇಂದ್ರದ ಜೊತೆಗೆ ಸಂಘರ್ಷ ಮಾಡುತ್ತಲೇ ಒಂದು ದಶಕ ಪೋಲು ಮಾಡಿತು. ಇಲ್ಲಿ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಬಿಜೆಪಿಗೆ ಒಂದು ಅವಕಾಶ ಕಲ್ಪಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಭಾನುವಾರ ಕೋರಿದರು.
‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಯಾವುದೇ ಜನಕಲ್ಯಾಣ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಆದರೆ, ಅದರ ಅನುಷ್ಠಾನದಲ್ಲಿ ಆಗುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೊಳಿಸಲಿದೆ’ ಎಂದು ಹೇಳಿದರು.
ರೋಹಿಣಿ ಬಡಾವಣೆಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಎಎಪಿ ಸರ್ಕಾರ ದೆಹಲಿಯ ಪಾಲಿಗೆ ‘ವಿಪತ್ತು’. ದೆಹಲಿಯು ಈ ‘ವಿಪತ್ತಿ’ನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಎಂಜಿನ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪ್ರತಿಪಾದಿಸಿದರು.
ದೆಹಲಿಯಲ್ಲಿ ಕೇಂದ್ರ ಸರ್ಕಾರವು ನಮೊ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ರೂಪಿಸುವ ಮೂಲಕ ಮೆಟ್ರೊ ರೈಲು ಜಾಲ ಅಭಿವೃದ್ಧಿಪಡಿಸುತ್ತಿದೆ. ಬೃಹತ್ ಆಸ್ಪತ್ರೆಗಳನ್ನು ನಡೆಸುತ್ತಿದೆ ಎಂದರು.
‘ನೀವು ಮೆಟ್ರೊ ರೈಲು ನಿಲ್ದಾಣದಿಂದ ಹೊರಗೆ ಬಂದಂತೆ ರಸ್ತೆಗಳಲ್ಲಿ ಗುಂಡಿಗಳು ಕಾಣುತ್ತವೆ. ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಕೆಲ ಬಡಾವಣೆಗಳಿಗೆ ಹೋಗಲು ಅಟೊ, ಕ್ಯಾಬ್ ಚಾಲಕರು ನಿರಾಕರಿಸುತ್ತಾರೆ. ದೆಹಲಿ ಕಳೆದ 10 ವರ್ಷಗಳಲ್ಲಿ ಈ ವಿಪತ್ತಿಗೆ ಸಾಕ್ಷಿಯಾಗಿದೆ. ದೆಹಲಿ ಜನರಿಗೆ ಇದು ಅರಿವಾಗಿದೆ. ಇನ್ನು ಸಹಿಸುವುದಿಲ್ಲ, ಬದಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಕೇಂದ್ರ ಸರ್ಕಾರವು ನಮೊ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ರೂಪಿಸುವ ಮೂಲಕ ಮೆಟ್ರೊ ರೈಲು ಜಾಲ ಅಭಿವೃದ್ಧಿಪಡಿಸುತ್ತಿದೆ. ಬೃಹತ್ ಆಸ್ಪತ್ರೆಗಳನ್ನು ನಡೆಸುತ್ತಿದೆ ಎಂದರು.
ಕೇಂದ್ರ –ದೆಹಲಿ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿ: ಕೇಜ್ರಿವಾಲ್
ನವದೆಹಲಿ: ‘ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದ ಎರಡು ಯೋಜನೆಗಳು ಕೇಂದ್ರ ಮತ್ತು ಎಎಪಿ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಜಾರಿಗೊಳಿಸಿದ್ದಾಗಿದೆ’ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಇಲ್ಲಿ ಪ್ರತಿಪಾದಿಸಿದರು. 13 ಕಿ.ಮೀ ಉದ್ದದ ದೆಹಲಿ –ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್ ಮತ್ತು ದೆಹಲಿ ಮೆಟ್ರೊ 4ನೇ ಹಂತದ ಜನಕ್‌ಪುರಿ ಪಶ್ಚಿಮ ಮತ್ತು ಕೃಷ್ಣಾ ಪಾರ್ಕ್ ಎಕ್ಸ್‌ಟೆನ್ಷನ್ ಸಂಪರ್ಕ ಸೇವೆಯನ್ನು ಪ್ರಧಾನಿ ಉದ್ಘಾಟಿಸಿದ್ದರು. ಆರ್‌ಆರ್‌ಟಿಎಸ್ ಕಾರಿಡಾರ್ ಉತ್ತರ ಪ್ರದೇಶದ ಗಾಜಿಯಾಬಾದ್ ಮತ್ತು ದೆಹಲಿಯ ನ್ಯೂ ಅಶೋಕ್ ನಗರ ನಡುವೆ ಸಂಪರ್ಕ ಕಲ್ಪಿಸಲಿದೆ. ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ಅವರು ‘ಎಎಪಿ ಸರ್ಕಾರ ಕೇವಲ ಸಂಘರ್ಷದಲ್ಲಿ ತೊಡಗಿದೆ ಎಂದು ಆರೋಪಿಸುವವರಿಗೆ ಈ ಯೋಜನೆಗಳೇ ಉತ್ತರ’ ಎಂದು ಹೇಳಿದರು. ‘ಹತ್ತು ವರ್ಷದಲ್ಲಿ ಎಎಪಿ ಸರ್ಕಾರ ಹಲವು ಸವಾಲು ಎದುರಿಸಿತು. ಪಕ್ಷದ ನಾಯಕರಿಗೆ ಕಿರುಕುಳ ನೀಡಲಾಯಿತು. ಜೈಲಿಗೆ ಕಳುಹಿಸಲಾಯಿತು. ಆದರೆ ನಾವು ಆಡಳಿತಕ್ಕೆ ಹೆಚ್ಚು ಒತ್ತು ನೀಡಿದೆವು. ಕೇವಲ ಅಭಿವೃದ್ಧಿಗೆ ಆದ್ಯತೆ ನೀಡಿದೆವು’ ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.