ADVERTISEMENT

ತೆರಿಗೆ ಬಾಕಿ ಪಾವತಿ: ಅನುಷ್ಕಾ ಶರ್ಮಾಗೆ ವಿನಾಯತಿ ನಿರಾಕರಣೆ

ಪಿಟಿಐ
Published 30 ಮಾರ್ಚ್ 2023, 14:10 IST
Last Updated 30 ಮಾರ್ಚ್ 2023, 14:10 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

ಮುಂಬೈ: ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆ ಅಡಿ(ಎಂವಿಟಿಎ) 2012ರಿಂದ 2016ರವರೆಗಿನ ಅವಧಿಯ ಬಾಕಿ ತೆರಿಗೆಯನ್ನು ಪಾವತಿಸುವಂತೆ ರಾಜ್ಯ ಮಾರಾಟ ತೆರಿಗೆ ಇಲಾಖೆ ನೀಡಿರುವ ಆದೇಶ ವಿರುದ್ಧ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ತಿರಸ್ಕರಿಸಿತು. ಜೊತೆಗೆ ಈ ಪ್ರಕರಣದಲ್ಲಿ ಅನುಷ್ಕಾ ಅವರಿಗೆ ವಿನಾಯತಿ ನೀಡಲೂ ಹೈಕೋರ್ಟ್‌ ನಿರಾಕರಿಸಿತು.

ತೆರಿಗೆ ಇಲಾಖೆಯ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಅನುಷ್ಕಾ ಅವರಿಗೆ ಎಂವಿಎಟಿ ಅಡಿ ಬದಲಿ ಮಾರ್ಗವಿದೆ ಎಂದು ನ್ಯಾಯಮೂರ್ತಿಗಳಾದ ನಿತಿನ್‌ ಜಾಮ್ದಾರ್‌ ಮತ್ತು ಅಭಯ್ ಅಹುಜಾ ಅವರಿದ್ದ ಪೀಠ ಹೇಳಿತು.

ಎಂವಿಎಟಿ ಅಡಿ ಮಾರಾಟ ತೆರಿಗೆಯ ಉಪ ಆಯುಕ್ತರಿಗೆ (ಅಪೀಲು) ನಾಲ್ಕು ವಾರಗಳ ಒಳಗೆ ಅರ್ಜಿ ಸಲ್ಲಿಸಲು ಕೋರ್ಟ್‌ ಅನುಷ್ಕಾಗೆ ಸೂಚನೆ ನೀಡಿತು. ಇದಕ್ಕಾಗಿ ಇಲಾಖೆ ವಿಧಿಸಿರುವ ತೆರಿಗೆ ಮೊತ್ತದಲ್ಲಿ ಶೇ 10ನ್ನು ಠೇವಣಿ ಇಡಬೇಕಾಗುತ್ತದೆ ಎಂದು ಹೇಳಿತು.

ADVERTISEMENT

ಅನುಷ್ಕಾ ಅವರು ನಡೆಸಿಕೊಡುವ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳ ಕೃತಿಸ್ವಾಮ್ಯದ ಮೊದಲ ಮಾಲೀಕರು ಅವರೇ ಆಗಿರುವುದರಿಂದ, ಈ ಪ್ರದರ್ಶನಗಳಿಂದ ಪಡೆಯುವ ಆದಾಯಕ್ಕೆ ಅವರು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಇಲಾಖೆ ಹೇಳಿತ್ತು. ಈ ಕುರಿತು 2021–22ರ ಅವಧಿಯಲ್ಲಿ ಅನುಷ್ಕಾ ಅವರಿಗೆ ಬಾಕಿ ಪಾವತಿಸುವಂತೆ ಆದೇಶ ನೀಡಿತ್ತು. ಇಲಾಖೆ ಪ್ರಕಾರ, 2012–13ರ ಅವಧಿಯಲ್ಲಿ ಅವರ ಆದಾಯವನ್ನು ₹12.3 ಕೋಟಿ ಎಂದು ಪರಿಗಣಿಸಲಾಗಿದೆ. ಈ ಮೊತ್ತದ ತೆರಿಗೆಯು ಬಡ್ಡಿ ಸೇರಿ ₹1.2 ಕೋಟಿ. 2013–14ರ ಅವಧಿಯ ತೆರಿಗೆ ₹1.6 ಕೋಟಿ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.