ADVERTISEMENT

ಅನುಮತಿ ಇಲ್ಲದೆ ಧಾರ್ಮಿಕ ಮೆರವಣಿಗೆಯಿಲ್ಲ: ಯೋಗಿ

ಉತ್ತರ ಪ್ರದೇಶ: ಕೋಮು ಸಂಘರ್ಷ ತಪ್ಪಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 17:23 IST
Last Updated 19 ಏಪ್ರಿಲ್ 2022, 17:23 IST
   

ಲಖನೌ (ಪಿಟಿಐ): ‘ಅನುಮತಿ ಪಡೆಯದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸುವಂತಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಹನುಮಾನ್ ಜಯಂತಿ, ಗುಜರಾತ್, ಮಧ್ಯಪ್ರದೇಶ ಮತ್ತ ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಆಚರಣೆ ವೇಳೆ ಘರ್ಷಣೆಗಳು ನಡೆದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಯೋಗಿ ಆದಿತ್ಯನಾಥ ಅವರು ಈ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸಂಬಂಧ ರಾಜ್ಯದ ಹಿರಿಯ ಪೊಲೀಸರ ಜತೆಗೆ ಯೋಗಿ ಅವರು ಮಂಗಳವಾರ ಸಭೆ ನಡೆಸಿದರು.

ಪ್ರತಿಯೊಬ್ಬರೂ ಅವರ ಧರ್ಮಕ್ಕೆ ಅನುಸಾರವಾಗಿ, ಪ್ರಾರ್ಥನೆ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ,ಅನುಮತಿ ಪಡೆಯದೆ ಧಾರ್ಮಿಕ ಮೆರವಣಿಗೆ ನಡೆಸುವಂತಿಲ್ಲ ಎಂದು ಯೋಗಿ ಅವರು ಟ್ವೀಟ್ ಮಾಡಿದ್ದಾರೆ. ಈದ್‌ ಹಬ್ಬ ಮತ್ತು ಅಕ್ಷತ ತೃತೀಯ ಆಚರಣೆ ಒಂದೇ ದಿನ ಬರುವ ಸಾಧ್ಯತೆ ಇರುವ ಕಾರಣ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ಒತ್ತು ನೀಡಬೇಕು. ಇದಕ್ಕಾಗಿ ಮೇ 4ರವರೆಗೆ ಪೊಲೀಸರ ರಜೆಯನ್ನು ರದ್ದುಗೊಳಿಸಲಾಗಿದೆ. ರಜೆ ಮೇಲೆ ತೆರಳಿರುವ ಪೊಲೀಸರು 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಯೋಗಿ ಅವರು ಆದೇಶಿಸಿದ್ದಾರೆ.

ADVERTISEMENT

ನಿರ್ದೇಶನಗಳು

* ‘ಮೆರವಣಿಗೆ ವೇಳೆ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತೇವೆ’ ಎಂದು ಮೆರವಣಿಗೆಯ ಆಯೋಜಕರಿಂದ ಪ್ರಮಾಣ ಪತ್ರ ಪಡೆಯಬೇಕು

* ಸಾಂಪ್ರದಾಯಿಕವಾಗಿ ಈ ಹಿಂದಿನಿಂದಲೂ ನಡೆಸುಕೊಂಡು ಬರುತ್ತಿರುವಂತಹ ಮೆರವಣಿಗೆಗಳಿಗೆ ಮಾತ್ರವೇ ಅನುಮತಿ ನೀಡಬೇಕು. ಹೊಸ ಸ್ವರೂಪದ ಮೆರವಣಿಗೆಗಳಿಗೆ ಅನುಮತಿ ನೀಡಬಾರದು

* ಧಾರ್ಮಿಕ ಆಚರಣೆ ಮತ್ತು ಕಾರ್ಯಕ್ರಮಗಳು ಸೂಚಿತ ಪ್ರದೇಶದಲ್ಲಷ್ಟೇ ನಡೆಯಬೇಕು. ಸಂಚಾರಕ್ಕೆ ಅಡಚಣೆಯಾಗುವಂತೆ ಯಾವುದೇ ಕಾರ್ಯಕ್ರಮಗಳು ನಡೆಯಬಾರದು

* ಧಾರ್ಮಿಕ ಆಚರಣೆಗಳಿಗಾಗಿ ಧ್ವನಿವರ್ಧಕಗಳನ್ನು ಬಳಸಬಹುದು. ಆದರೆ ಆಚರಣೆ ನಡೆಯುತ್ತಿರುವ ಸ್ಥಳದ ಆವರಣದಿಂದ ಹೊರಗೆ ಧ್ವನಿವರ್ಧಕದ ಶಬ್ದ ಕೇಳಬಾರದು. ಧ್ವನಿವರ್ಧಕದಿಂದ ಬೇರೆಯವರಿಗೆ ತೊಂದರೆಯಾಗಬಾರದು

* ಎಲ್ಲಾ ಧರ್ಮದ ಮುಖಂಡರ ಜತೆಗೆ ಮುಂದಿನ 24 ಗಂಟೆಗಳ ಒಳಗೆ ಪೊಲೀಸರು ಮಾತುಕತೆ ನಡೆಸಬೇಕು. ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಬೇಕು

* ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪ್ರತಿದಿನ ಗಸ್ತು ನಡೆಸಬೇಕು. ಕ್ಷಿಪ್ರ ಪ್ರತಿಸ್ಪಂದನಾ ಪಡೆಯ ವಾಹನಗಳು ಈ ಪ್ರದೇಶದಲ್ಲಿ ಇರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.