ADVERTISEMENT

ಮುಸ್ಲಿಮರ ಮೇಲೆ ಹೂಮಳೆಗರೆಯುವುದಿಲ್ಲ; ಅವರ ಮನೆಗಳನ್ನು ನೆಲಸಮ ಮಾಡುತ್ತಾರೆ: ಓವೈಸಿ

ಕನ್ವರ್‌ ಯಾತ್ರಿಗಳ ಮೇಲೆ ಹೂಮಳೆಗೆ ಓವೈಸಿ ಟೀಕೆ * ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ

ಪಿಟಿಐ
Published 27 ಜುಲೈ 2022, 11:12 IST
Last Updated 27 ಜುಲೈ 2022, 11:12 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ನವದೆಹಲಿ: ‘ಕನ್ವರ್‌ ಯಾತ್ರಿಗಳ ಮೇಲಷ್ಟೇ ಉತ್ತರ ಪ್ರದೇಶ ಸರ್ಕಾರ ಹೂವಿನ ಪಕಳೆಗಳ ಮಳೆಗೆರೆಯುತ್ತಾರೆ. ಈ ರೀತಿಯ ಸ್ವಾಗತ ಮುಸ್ಲಿಮರಿಗೆ ನೀಡುವುದಿಲ್ಲ. ಬದಲಾಗಿ ಅವರ ಮನೆಗಳನ್ನು ನೆಲಸಮ ಮಾಡುತ್ತಾರೆ’ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಬುಧವಾರ ವಾಗ್ದಾಳಿ ನಡೆಸಿದರು.

ಸಂಸತ್‌ನ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರ ತೆರಿಗೆ ಹಣವನ್ನು ಬಳಸಿ ಕನ್ವರ್‌ ಯಾತ್ರಿಗಳ ಮೇಲೆ ಹೂಮಳೆಗೆರೆಯಲಾಯಿತು. ಎಲ್ಲ ಸಮುದಾಯದವರನ್ನು ಸಮನಾಗಿ ಕಾಣಬೇಕು ಎಂದು ನಾವು ಬಯಸುತ್ತೇವೆ’ ಎಂದು ಹೇಳಿದರು.

ಕನ್ವರ್‌ ಯಾತ್ರೆ ಕುರಿತು ಪ್ರಕಟಗೊಂಡಿರುವ ವರದಿಗಳನ್ನು ಪ್ರಸ್ತಾಪಿಸಿದ ಅವರು, ‘ಸಾರ್ವಜನಿಕ ಪ್ರದೇಶದಲ್ಲಿ ಕೆಲವೇ ನಿಮಿಷಗಳ ಕಾಲ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರೆ, ಅದು ದೊಡ್ಡ ವಿವಾದವಾಗುತ್ತದೆ. ಮುಸ್ಲಿಮರು ಪೊಲೀಸರ ಗುಂಡುಗಳನ್ನು ಎದುರಿಸಬೇಕಾಗುತ್ತದೆ, ಕಸ್ಟಡಿಯಲ್ಲಿರಬೇಕಾಗುತ್ತದೆ. ಎನ್‌ಎಸ್‌ಎ, ಯುಎಪಿಎ ಅಡಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಹತ್ಯೆ, ಬುಲ್ಡೋಜರ್‌ಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ನೀವು ಒಂದು ಸಮುದಾಯವನ್ನು ಪ್ರೀತಿಸಿದರೆ, ಮತ್ತೊಂದು ಸಮುದಾಯವನ್ನು ದ್ವೇಷಿಸಬಾರದು. ನೀವು ವಿಶ್ವಾಸ ತೋರಿಸಿದರೆ, ಇತರರು ನಿಮ್ಮಲ್ಲಿ ವಿಶ್ವಾಸ ಇರಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.