ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಒಂದು ಕೊಳಗೇರಿಯನ್ನು ಕೆಡವಲ್ಲ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಈ ಕುರಿತಂತೆ ಎಎಪಿ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿರುವ ಹೇಳಿಕೆಗಳನ್ನು ಅವರು ಅಲ್ಲಗಳೆದಿದ್ದಾರೆ.
ದೆಹಲಿಯ ಆರ್.ಕೆ. ಪುರಂನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ಕೊಳಗೇರಿಗಳಲ್ಲಿ ನೆಲೆಸಿರುವ ಜನರಿಗೆ ಕೇವಲ ಐದು ರೂಪಾಯಿಗಳಲ್ಲಿ ಪೌಷ್ಠಿಕಾಂಶಭರಿತ ಊಟ ನೀಡುವ ಭರವಸೆ ನೀಡಿದರು.
‘ಆಟೊ ಚಾಲಕರು ಮತ್ತು ಮನೆಗೆಲಸದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ, ಅವರಿಗೆ ₹10 ಲಕ್ಷವರೆಗೆ ವಿಮಾ ರಕ್ಷಣೆ ನೀಡಲಾಗುವುದು. ಮಕ್ಕಳ ಶಾಲಾ ಶುಲ್ಕಕ್ಕೆ ಬಿಜೆಪಿ ಸರ್ಕಾರವು ನೆರವು ನೀಡಲಿದೆ. ಎಎಪಿ ಜನರಿಗೆ ಸುಳ್ಳನ್ನು ಹರಡುತ್ತಿದೆ. ಆದರೆ, ದೆಹಲಿಯ ಒಂದೇ ಒಂದು ಕೊಳಗೇರಿಯನ್ನು ಕೆಡವಲ್ಲ. ದೆಹಲಿಯಲ್ಲಿ ಸಾರ್ವಜನಿಕರ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ನಾನು ಇನ್ನೊಂದು ಗ್ಯಾರಂಟಿ ಕೊಡುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ದೆಹಲಿಯ ಕೊಳಗೇರಿಗಳನ್ನು ಕೆಡವಲಾಗುತ್ತದೆ ಎಂದು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.
ಪೂರ್ವಾಂಚಲದ ಜನರು ನನ್ನನ್ನು ಸಂಸದ ಮತ್ತು ಪ್ರಧಾನ ಮಂತ್ರಿಯನ್ನಾಗಿ ಮಾಡಿದರು ಎಂದು ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.
‘ದಶಕಗಳ ಕಾಲ ಜಂಗಲ್ ರಾಜ್ ಮನಸ್ಥಿತಿಯ ಕಾಂಗ್ರೆಸ್, ಬಿಹಾರವನ್ನು ಕಡೆಗಣಿಸಿತ್ತು. ಆದರೆ, ಇಂದು ಎನ್‌ಡಿಎ ಸರ್ಕಾರವು ಮಖಾನಾ ಮಂಡಳಿ ಘೋಷಿಸುವ ಮೂಲಕ ಬಿಹಾರಕ್ಕಾಗಿ ದಣಿವರಿಯದೆ ದುಡಿಯುತ್ತಿದೆ. ಬಿಹಾರದ ಬಹುತೇಕ ಮಖಾನಾ ಕೃಷಿಕರು ದಲಿತ ಸಮುದಾಯದಿಂದ ಬಂದವರಾಗಿದ್ದಾರೆ. ನಾನು ಅವರ ಕಲ್ಯಾಣಕ್ಕಾಗಿ ಶ್ರಮಿಸಿದರೆ, ಈ ಜನ(ಕಾಂಗ್ರೆಸ್) ನನ್ನ ಬಗ್ಗೆ ತಮಾಷೆ ಮಾಡುತ್ತಾರೆ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.