ADVERTISEMENT

ಪಂಜಾಬ್: ಸ್ಥಳೀಯ ಸಮಸ್ಯೆಗಳೇ ಚುನಾವನಾ ವಿಷಯ

​ಪ್ರಜಾವಾಣಿ ವಾರ್ತೆ
Published 16 ಮೇ 2019, 20:43 IST
Last Updated 16 ಮೇ 2019, 20:43 IST
   

ಅಮೃತಸರ: 1984ರ ಸಿಖ್ಖರ ನರಮೇಧ, ರೈತರ ಆತ್ಮಹತ್ಯೆ, ರೈತರ ಸಾಲಮನ್ನಾ, ಮಾದಕ ವಸ್ತು ಜಾಲದ ನಿಯಂತ್ರಣ, ನಿರುದ್ಯೋಗದ ಸಮಸ್ಯೆ... ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಯ ವಿಷಯಗಳಿವು.

ಈ ಬಾರಿಯ ಲೋಕಸಭಾ ಚುನಾವಣೆ ಘೋಷಣೆಯಾದಾಗ ಪಂಜಾಬ್‌ನಲ್ಲಿ ಸ್ಪರ್ಧೆ ಇದ್ದದ್ದು ಕಾಂಗ್ರೆಸ್‌ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್ ನಡುವೆ ಮಾತ್ರ. ಈಗಲೂ ಅದೇ ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿಯಾಗಲೀ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯಾಗಲೀ ಇಲ್ಲಿ ಚರ್ಚೆಯ ವಿಷಯ ಅಲ್ಲ ಎನ್ನುವ ಸ್ಥಿತಿ ಇದೆ.

ದೇಶದ ಎಲ್ಲೆಡೆ ಬಿಜೆಪಿಯು ರಾಷ್ಟ್ರೀಯ ಭದ್ರತೆಯ ವಿಚಾರದ ಆಧಾರದಲ್ಲಿ ಮತ ಕೇಳುತ್ತಿದೆ. ಆದರೆ ಪಂಜಾಬ್‌ನಲ್ಲಿ ಈ ತಂತ್ರ ಫಲಪ್ರದವಾಗುವ ಸಾಧ್ಯತೆ ತೀರಾ ಕಡಿಮೆ. ರಾಜ್ಯದ 13ರಲ್ಲಿ 3 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಕಣಕ್ಕೆ ಇಳಿದಿದೆ. ಉಳಿದ ಹತ್ತರಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷವಾದ ಅಕಾಲಿ ದಳ ಸ್ಪರ್ಧೆಗೆ ಇಳಿದಿದೆ. ಅಕಾಲಿ ದಳ ಸಹ ರಾಷ್ಟ್ರೀಯ ಭದ್ರತೆಯ ವಿಚಾರವನ್ನು ತನ್ನ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸುತ್ತಿಲ್ಲ.

ADVERTISEMENT

‘ಬಾಲಾಕೋಟ್‌ ದಾಳಿ ನಡೆಸಿದ್ದು ವಾಯುಪಡೆಯ ಕಮಾಂಡರ್‌ಗಳು. ಬಿಜೆಪಿ ಆ ದಾಳಿ ನಡೆಸಿಲ್ಲ. ತಮ್ಮೊಬ್ಬರಿಂದಲೇ ದೇಶದ ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿಕೊಳ್ಳುವ ಬಿಜೆಪಿಯ ಮಾತಿಗೆ ಪಂಜಾಬ್‌ ಜನರು ಮರುಳಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವುದಾಗಿ ಭರವಸೆ ನೀಡುತ್ತಾ ಕಾಂಗ್ರೆಸ್‌ ಮತ ಕೇಳುತ್ತಿದೆ. ಆದರೆ 2017ರ ವಿಧಾನಸಭೆ ಚುನಾವಣೆಯಲ್ಲೂ ನಿರುದ್ಯೋಗ ಸಮಸ್ಯೆ ನಿವಾರಣೆ ಕಾಂಗ್ರೆಸ್‌ನ ಪ್ರಣಾಳಿಕೆಯ ಪ್ರಧಾನ ವಿಚಾರವಾಗಿತ್ತು. ಆದರೆ ಈ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್‌ ಸರ್ಕಾರ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಇದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ.2014ರಲ್ಲಿ ಬಿಜೆಪಿ, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ’ ಎಂದು ಹೇಳಿತ್ತು. ಅದನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ.ಹೀಗಾಗಿ ಬಿಜೆಪಿ–ಅಕಾಲಿ ದಳಕ್ಕೂ ಸಹ ನಿರುದ್ಯೋಗ ಸಮಸ್ಯೆ ಮುಳುವಾಗುವ ಸಾಧ್ಯತೆ ಅಧಿಕವಾಗಿಯೇ ಇದೆಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿತ್ತು. ಆದರೆ ಈ ಭರವಸೆಯನ್ನು ಪೂರ್ಣಪ್ರಮಾಣದಲ್ಲಿ ಈಡೇರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈವರೆಗೆ 5.8 ಲಕ್ಷ ರೈತರಿಗಷ್ಟೇ ಸಾಲಮನ್ನಾ ಯೋಜನೆಯ ಲಾಭ ದೊರೆತಿದೆ. ಆದರೆ ಕಾಂಗ್ರೆಸ್‌ ಆಡಳಿತದ ಎರಡು ವರ್ಷಗಳಲ್ಲಿ 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿಯು ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸುವ ಸಾಧ್ಯತೆ ಇದೆ.ಆದರೆ ಕಾಂಗ್ರೆಸ್‌ನ ‘ನ್ಯಾಯ್’ ಭರವಸೆಯು ನಿರುದ್ಯೋಗಿಗಳು ಮತ್ತು ರೈತರನ್ನು ಸೆಳೆಯುವ ಸಾಧ್ಯತೆಯೂ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ಎಲ್ಲಾ ವಿಚಾರಗಳಿಗಿಂತ 1984ರ ಸಿಖ್ಖರ ನರಮೇಧ ವಿಚಾರವು ಪಂಜಾಬ್‌ನ ಮತದಾರರನ್ನು ಪ್ರಭಾವಿಸುತ್ತದೆ ಇದೆ ಎಂದು ಅಕಾಲಿ ದಳದ ನಾಯಕರು ಹೇಳಿದ್ದಾರೆ. ಸಿಖ್ಖರಿಗೆ ಬುದ್ಧಿ ಕಲಿಸಿ ಎಂದುಸ್ವತಃ ರಾಜೀವ್‌ ಗಾಂಧಿಯೇ ಆದೇಶ ನೀಡಿದ್ದರು ಎಂದು ಅಕಾಲಿ ದಳದ ನಾಯಕರು ತಮ್ಮ ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ಈ ವಿಷಯವನ್ನು ಬಳಸಿಕೊಂಡು ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದರಿಂದ ಎನ್‌ಡಿಎಗೆ ಲಾಭವಾಗುತ್ತದೆಯೇ ಎಂಬುದನ್ನು ನೋಡಲು ಮೇ 23ರವರೆಗೆ ಕಾಯಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.