ADVERTISEMENT

ಮಧ್ಯಪ್ರದೇಶ: ಸಚಿವಾಲಯದಲ್ಲಿ ವಂದೇ ಮಾತರಮ್ ಹಾಡದ್ದಕ್ಕೆ ಬಿಜೆಪಿ ಆಕ್ರೋಶ

ತಿಂಗಳ ಮೊದಲ ದಿನ ದೇಶಭಕ್ತಿಗೀತೆ ಹಾಡುವ ಸಂಪ್ರದಾಯ ಜಾರಿಗೆ ತಂದಿದ್ದ ಚೌಹಾಣ್ ಸರ್ಕಾರ

ಏಜೆನ್ಸೀಸ್
Published 2 ಜನವರಿ 2019, 6:57 IST
Last Updated 2 ಜನವರಿ 2019, 6:57 IST
ಕಮಲನಾಥ್ ಮತ್ತು ಶಿವರಾಜ್ ಸಿಂಗ್ ಚೌಹಾಣ್
ಕಮಲನಾಥ್ ಮತ್ತು ಶಿವರಾಜ್ ಸಿಂಗ್ ಚೌಹಾಣ್   

ಭೋಪಾಲ್: ಜನವರಿ ಒಂದರಂದು ಮಧ್ಯಪ್ರದೇಶದ ಸಚಿವಾಲಯದಲ್ಲಿ ವಂದೇ ಮಾತರಮ್ ಹಾಡದಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರತಿ ತಿಂಗಳ ಮೊದಲ ದಿನ ಕೆಲಸ ಆರಂಭಿಸುವುದಕ್ಕೂ ಮುನ್ನ ವಂದೇ ಮಾತರಮ್ ಹಾಡುವ ಸಂಪ್ರದಾಯವನ್ನು ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಆಡಳಿತವಿದ್ದಾಗ ಜಾರಿಗೆ ತರಲಾಗಿದ್ದು, ಕಳೆದ 13 ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ, 2019ರ ಜನವರಿ ಒಂದರಂದು ‘ವಲ್ಲಭ ಭವನ (ಸಚಿವಾಲಯ)’ದಲ್ಲಿ ವಂದೇ ಮಾತರಮ್ ಹಾಡಿರಲಿಲ್ಲ.

‘ಕಾಂಗ್ರೆಸ್ ಸರ್ಕಾರ ಸಂಪ್ರದಾಯವನ್ನು ಮುರಿದಿರುವುದು ದುರದೃಷ್ಟಕರ. ಮತ್ತೆ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ’ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಗ್ರಹಿಸಿದ್ದಾರೆ. ವಂದೇ ಮಾತರಮ್ ಹಾಡದಿರುವುದಕ್ಕೆ ಮುಖ್ಯಮಂತ್ರಿ ಕಮಲನಾಥ್ ಅವರ ಸೂಚನೆಯೇ ಕಾರಣ ಎಂದು ಕೆಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ADVERTISEMENT

ಕಮಲನಾಥ್ ಸ್ಪಷ್ಟನೆ

ಬಿಜೆಪಿ ಮಾಡಿರುವ ಆರೋಪಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಕಮಲನಾಥ್, ವಂದೇ ಮಾತರಮ್ ಹಾಡುವ ಸಂಪ್ರದಾಯ ಕೊನೆಗೊಳಿಸಲು ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಆದೇಶವನ್ನು ತಡೆಹಿಡಿಯಲಾಗಿದ್ದು, ಹೊಸ ರೂಪದೊಂದಿಗೆ ಮರಳಿ ಜಾರಿಗೆ ತರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಗೆ ತಿರುಗೇಟು

‘ಆದೇಶವನ್ನು ತಡೆಹಿಡಿದಿರುವುದರ ಹಿಂದೆ ರಾಜಕೀಯ ಉದ್ದೇಶವಿಲ್ಲ. ವಂದೇ ಮಾತರಮ್ ಹಾಡುವುದಕ್ಕೆ ಕಾಂಗ್ರೆಸ್‌ನ ವಿರೋಧವೂ ಇಲ್ಲ’ ಎಂದು ಕಮಲನಾಥ್ ಹೇಳಿದ್ದಾರೆ.

‘ದೇಶಭಕ್ತಿಗೀತೆ ನಮ್ಮ ಹೃದಯದಲ್ಲಿದೆ. ಆದಾಗ್ಯೂ, ವಂದೇ ಮಾತರಮ್‌ ಹಾಡುವುದೊಂದೇ ದೇಶಭಕ್ತಿಗೆ ನೀಡುವ ಪ್ರಮಾಣಪತ್ರವಲ್ಲ ಎಂಬುದನ್ನೂ ನಾವು ನಂಬಿದ್ದೇವೆ. ತಿಂಗಳಲ್ಲಿ ಒಮ್ಮೆ ದೇಶಭಕ್ತಿಗೀತೆ ಹಾಡುವುದನ್ನು ದೇಶದ ಮೇಲಿರುವ ಪ್ರೀತಿ ಜತೆ ಹೋಲಿಸಲಾಗದು. ವಂದೇ ಮಾತರಮ್ ಹಾಡದವರಲ್ಲಿ ಕಡಿಮೆ ದೇಶಭಕ್ತಿ ಇದೆಯೇ?’ ಎಂದು ಕಮಲನಾಥ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ದೇಶಭಕ್ತಿ ಎಂಬುದು ಭಾವನೆಗೆ ಸಂಬಂಧಿಸಿದ್ದು. ಅದನ್ನು ಪ್ರದರ್ಶಿಸಬೇಕಾಗಿಲ್ಲ ಎಂಬುದರಲ್ಲಿ ಕಾಂಗ್ರೆಸ್‌ಗೆ ನಂಬಿಕೆ ಇದೆ. ಈ ವಿಚಾರವನ್ನು ಬಿಜೆಪಿ ರಾಜಕೀಯಗೊಳಿಸಬಾರದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.