ADVERTISEMENT

ಟಿಎಂಸಿ, ಎಎಪಿಯಿಂದ ಬಿಜೆಪಿಯೇತರ ಮತ ವಿಭಜನೆ: ಪಿ. ಚಿದಂಬರಂ

ಪಿಟಿಐ
Published 26 ಡಿಸೆಂಬರ್ 2021, 19:16 IST
Last Updated 26 ಡಿಸೆಂಬರ್ 2021, 19:16 IST
ಪಿ. ಚಿದಂಬರಂ
ಪಿ. ಚಿದಂಬರಂ    

ನವದೆಹಲಿ: ಬಿಜೆಪಿಯೇತರ ಮತಗಳನ್ನುತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಆಮ್‌ ಆದ್ಮಿ ಪಕ್ಷ (ಎಎಪಿ) ಒಡೆಯುತ್ತಿವೆ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಆರೋಪಿಸಿದರು. ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದರು.

ಗೋವಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಅವರು, ಪಕ್ಷಕ್ಕೆ ಮತ್ತು ಮತದಾರರಿಗೆ ನಿಷ್ಠರಾಗಿರುವುದೇ ಅಭ್ಯರ್ಥಿಗಳ ಆಯ್ಕೆಗೆ ಇರುವ ಮೊದಲ ಮಾನದಂಡ. ಚುನಾವಣೆಯಲ್ಲಿ ಗೆದ್ದ ಬಳಿಕ ಅಭ್ಯರ್ಥಿಗಳು ಪಕ್ಷಕ್ಕೆ ಮತ್ತು ಮತದಾರರಿಗೆ ನಿಷ್ಠರಾಗಿ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಶಾಸನಸಭೆಗೆ ರಾಜೀನಾಮೆ ನೀಡಿ ಟಿಎಂಸಿ ಸೇರಿದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದರು.

ADVERTISEMENT

ಟಿಎಂಸಿ ಪಕ್ಷವು ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ನಿಮಗೆ ಅನಿಸುತ್ತಿದೆಯಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೇರೆ ಪಕ್ಷಗಳ ಉದ್ದೇಶಗಳ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. 2022ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಅದರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುತ್ತದೆ’ ಎಂದರು. 40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಸದ್ಯ ಇಬ್ಬರು ಕಾಂಗ್ರೆಸ್‌ ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.