ಮೀಜೊರಾಂನ ಐಜ್ವಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಐಜ್ವಾಲ್: ‘ಮತಬ್ಯಾಂಕ್ ರಾಜಕೀಯದಿಂದ ನರಳಿದ್ದ ಭಾರತದ ಈಶಾನ್ಯ ಭಾಗವು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕಳೆದ 11 ವರ್ಷಗಳ ಆಡಳಿತದಿಂದಾಗಿ ಅಭಿವೃದ್ಧಿಯ ಎಂಜಿನ್ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಮೀಜೊರಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ₹9 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಕಾರ್ಯಕ್ರಮ ಲಾಮ್ಮುಲಾ ಮೈದಾನದಲ್ಲಿ ಆಯೋಜನೆಗೊಂಡಿತ್ತು. ಆದರೆ ಅತಿಯಾದ ಮಳೆಯಿಂದಾಗಿ ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದಲೇ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು.
‘ಕೇಂದ್ರ ಸರ್ಕಾರದ ‘ಆ್ಯಕ್ಟ್ ಈಸ್ಟ್’ ಯೋಜನೆ ಮತ್ತು ಕಲಾದನ್ ಮಲ್ಟಿಮಾಡೆಲ್ ಯೋಜನೆ ಮೂಲಕ ಆಗ್ನೇಯ ಭಾರತದೊಂದಿಗೆ ಜೋಡಿಸುವ ಕಾರ್ಯದಲ್ಲಿ ಮೀಜೋರಾಂ ಬಹುಮುಖ್ಯ ಪಾತ್ರ ವಹಿಸಿದೆ. ಬೈರಾಬಿ–ಸಾಯ್‌ರಂಗ್ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ದೇಶದ ರೈಲ್ವೆ ನಕ್ಷೆಯಲ್ಲಿ ಮೀಜೊರಾಂ ಸಂಪರ್ಕ ಕೊಂಡಿಯಂತಾಗಿದೆ. ಹೀಗಾಗಿ ಇದು ಐತಿಹಾಸಿಕ ದಿನವಾಗಿದೆ’ ಎಂದು ಬಣ್ಣಿಸಿದರು.
‘ಈ ಸಂಪರ್ಕದಿಂದ ಈಶಾನ್ಯದಲ್ಲಿ ಶಿಕ್ಷಣ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪರ್ಕ ಸಾಧ್ಯವಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಪ್ರವಾಸೋದ್ಯಮ ಬೆಳೆಯಲಿದೆ. ಹಿಂದೆ ಯಾರೆಲ್ಲಾ ವಂಚಿತರಾಗಿದ್ದರೋ ಅವರೆಲ್ಲರೂ ಈಗ ತಮ್ಮ ಹೆಜ್ಜಗುರುತುಗಳನ್ನು ಮೂಡಿಸಲು ಸಾಧ್ಯ. ಹಿಂದೆ ಅವಕಾಶ ವಂಚಿತರೆಲ್ಲರೂ ಈಗ ಮುಖ್ಯವಾಹಿನಿಗೆ ಬರಲಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಈಶಾನ್ಯ ಭಾರತದಲ್ಲಿ 4,500 ಸ್ಟಾರ್ಟ್‌ಅಪ್‌ಗಳು ತಲೆ ಎತ್ತಿವೆ. 25 ಇನ್‌ಕ್ಯುಬೇಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸ ಜಿಎಸ್‌ಟಿ ದರದಿಂದ ಈ ಭಾಗದ ಜನರ ಬದುಕು ಇನ್ನಷ್ಟು ಹಸನಾಗಲಿದೆ. ಕ್ಯಾನ್ಸರ್ ಹಾಗೂ ಇನ್ನಿತರ ಕಾಯಿಲೆಗಳ ಔಷಧಗಳು ಎಲ್ಲರ ಕೈಗೆಟುಕಲಿವೆ. ವಾಹನಗಳ ಬೆಲೆ ಇಳಿಯಲಿದೆ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.