ADVERTISEMENT

Delhi Floods | 'ಎದ್ದೇಳಿ ದೆಹಲಿಗರೇ' ಎಂದು ಟ್ವೀಟ್ ಮಾಡಿದ ಗೌತಮ್‌ ಗಂಭೀರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2023, 10:36 IST
Last Updated 13 ಜುಲೈ 2023, 10:36 IST
ಗೌತಮ್‌ ಗಂಭೀರ್
ಗೌತಮ್‌ ಗಂಭೀರ್   

ನವದೆಹಲಿ: ದೆಹಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ದೆಹಲಿಗರೇ ಎದ್ದೇಳಿ... ಯಾವುದೂ ಉಚಿತವಾಗಿಲ್ಲ..' ಎಂದು ಟ್ವೀಟ್‌ ಮಾಡಿದ್ದಾರೆ.

ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಇಡೀ ದೆಹಲಿಯೇ ಮುಳುಗಿದೆ. ಯಮುನಾ ನದಿ ಒಳಹರಿವು ಗರಿಷ್ಠಮಟ್ಟಕೇರಿದೆ. ರಸ್ತೆ, ಮನೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಪ್ರವಾಹದಲ್ಲಿ ಮುಳುಗಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಹರಸಾಹಸಪಡುತ್ತಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಸಂಸದ ಗೌತಮ್‌ ಗಂಭೀರ್‌, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ದೆಹಲಿಗರೇ ಎಚ್ಚೆತ್ತುಕೊಳ್ಳಿ.... ದೆಹಲಿ ಗಟಾರವಾಗಿ ಮಾರ್ಪಟ್ಟಿದೆ.... ಯಾವುದೂ ಉಚಿತವಾಗಿಲ್ಲ.... ಇದೇ ನಿಜವಾದ ಬೆಲೆ....‘ ಎಂದು ದೆಹಲಿ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಯುಮುನಾ ನದಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಆಡಳಿತರೂಢ ಪಕ್ಷ ಎಎಪಿ ಮತ್ತು ಬಿಜೆಪಿಯ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ನಿರ್ಲಕ್ಷ್ಯ ಮತ್ತು ಪೂರ್ವ ಸಿದ್ದತೆ ಕೊರತೆಯೇ ಪ್ರವಾಹ ಪರಿಸ್ಥಿತಿಗೆ ಕಾರಣವೆಂದು ಬಿಜೆಪಿ ಎಎಪಿಯನ್ನು ದೂರಿದೆ.

ಪ್ರವಾಹ ಪರಿಸ್ಥಿತಿಯ ಕುರಿತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆ ಕೇಜ್ರಿವಾಲ್‌ ಸಭೆ ನಡೆಸಿದ್ದಾರೆ. ಸಭೆಯ ನಂತರ ಕೆಲವು ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ. ಭಾನುವಾರದವರೆಗೆ ಶಾಲಾ–ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ ನೌಕಕರಿಗೆ ‘ವರ್ಕ್‌ ಫ್ರಮ್‌ ಹೋಮ್‘ನಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.