ಜನಗಣತಿ
ನವದೆಹಲಿ: 16ನೇ ಜನಗಣತಿ ನಡೆಸಲು ಕೇಂದ್ರ ಸರ್ಕಾರವು ಸೋಮವಾರ ಅಧಿಸೂಚನೆ ಹೊರಡಿಸಿದೆ. 2011ರಲ್ಲಿ ಕೊನೆಯ ಬಾರಿಗೆ ಗಣತಿ ನಡೆದಿದ್ದು, 16 ವರ್ಷಗಳ ನಂತರ ಜಾತಿ ಸೇರಿದಂತೆ ಇತರೆ ಪ್ರಮುಖ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಜನಗಣತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಲಡಾಖ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂದಂತಹ ಹಿಮ ಆವರಿಸುವ ಪ್ರದೇಶಗಳಲ್ಲಿ 2026ರ ಅಕ್ಟೋಬರ್ 1ರಿಂದ ಮತ್ತು ದೇಶದ ಉಳಿದ ಭಾಗಗಳಲ್ಲಿ 2027ರ ಮಾರ್ಚ್ 1ರಿಂದ ಜನಗಣತಿಯನ್ನು ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೇಶದಾದ್ಯಂತ ಜನಸಂಖ್ಯಾ ಸಂಬಂಧಿತ ದತ್ತಾಂಶ ಕಲೆ ಹಾಕುವ ಬೃಹತ್ ಕಾರ್ಯವನ್ನು ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, ಡಿಜಿಟಲ್ ಸಾಧನಗಳೊಂದಿಗೆ ಸಜ್ಜಿತವಾದ ಸುಮಾರು 1.3 ಲಕ್ಷ ಜನಗಣತಿ ಕಾರ್ಯಕರ್ತರು ಮಾಡಲಿದ್ದಾರೆ.
ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಸಹ ಮಾಡಲಾಗುತ್ತದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನಗಣತಿಯ ಸಿದ್ಧತೆಯನ್ನು ಪರಿಶೀಲಿಸಿದ್ದರು.
ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆ (ಎಚ್‌ಎಲ್‌ಒ) ನಡೆಸಲಾಗುವುದು. ಇದರಲ್ಲಿ ಪ್ರತಿ ಮನೆಯ ಸ್ಥಿತಿ, ನಿವಾಸಿಯ ಆಸ್ತಿ ಮತ್ತು ಇತರ ಮಾಹಿತಿ ಸಂಗ್ರಹಿಸಲಾಗುತ್ತದೆ.
ತರುವಾಯ, ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ (ಪಿಇ) ನಡೆಯುತ್ತದೆ. ಇದರಲ್ಲಿ ಮನೆಯ ಜನಸಂಖ್ಯೆ, ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ಜನಗಣತಿ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಇದು 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯದ ನಂತರ ಎಂಟನೇ ಜನಗಣತಿಯಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ದತ್ತಾಂಶ ಸಂಗ್ರಹಣೆ, ಪ್ರಸರಣ ಮತ್ತು ದಾಖಲು ಮಾಡುವ ಸಮಯದಲ್ಲಿ ದತ್ತಾಂಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಹಳ ಕಠಿಣ ದತ್ತಾಂಶ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.