ಲಾಲು ಪ್ರಸಾದ್ ಯಾದವ್–ಪಿಟಿಐ ಚಿತ್ರ
ಪಾಟ್ನಾ: ‘ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್ ಅವರು ತಮ್ಮ ಪಾದಗಳ ಕೆಳಗಡೆ ಅಂಬೇಡ್ಕರ್ ಅವರ ಭಾವಚಿತ್ರ ಇಡುವ ಮೂಲಕ ಬಾಬಾ ಸಾಹೇಬರಿಗೆ ಅಗೌರವ ತೋರಿದ್ದಾರೆ’ ಎಂದು ನಿತೀಶ್ ಕುಮಾರ್ ನೇತೃತ್ವದ ಜೆಡಿ–ಯು ವಾಗ್ದಾಳಿ ನಡೆಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿ(ಯು) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್, ‘ಲಾಲೂ ಅವರ ನಡೆಯನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. 20 ವರ್ಷಗಳಿಂದ ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ಅವರು, ದಲಿತರು ಸೇರಿದಂತೆ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅವರ ನೀತಿಗಳು ತಳಮಟ್ಟದಲ್ಲಿಯೂ ಪರಿಣಾಮ ಬೀರಿವೆ’ ಎಂದು ತಿಳಿಸಿದರು.
ಶ್ಯಾಮ್ ರಜಕ್ ಕಳೆದ ವರ್ಷವಷ್ಟೇ ಆರ್‌ಜೆಡಿ ತೊರೆದು ಜೆಡಿಯು ಸೇರಿದ್ದರು. ಈ ಹಿಂದೆ ಆರ್‌ಜೆಡಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
ಬಿಜೆಪಿ ಪ್ರತಿಭಟನೆ:
ಲಾಲೂ ಅವರ ನಡೆಯನ್ನು ಖಂಡಿಸಿ, ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ಸದಸ್ಯರು ರಾಜ್ಯದ ವಿವಿಧೆಡೆ ಅವರ ಪ್ರತಿಕೃತಿ ದಹಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.
ಆರ್‌ಜೆಡಿ ಸಮರ್ಥನೆ:
ವಿವಾದ ಕುರಿತಂತೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ವಕ್ತಾರ ಶಕ್ತಿ ಯಾದವ್, ‘ವ್ಯಕ್ತಿಯೊಬ್ಬರು ಅಂಬೇಡ್ಕರ್ ಭಾವಚಿತ್ರವನ್ನು ಲಾಲೂ ಅವರ ಮನೆಗೆ ತಂದುಕೊಡುವ ವೇಳೆ ‘ಕ್ಯಾಮೆರಾದ ಕೋನ’ದಿಂದ ಆ ರೀತಿ ಕಾಣುತ್ತಿದೆ. ಆದರೆ, ಭಾವಚಿತ್ರವನ್ನು ಕೈಯಲ್ಲೇ ಹಿಡಿದುಕೊಂಡಿದ್ದು, ಸೋಫಾದ ಮೇಲೆ ಇಡುವಂತೆ ಲಾಲೂ ಅವರು ತಿಳಿಸಿದ್ದಾರೆ. ಅವರು (ಲಾಲು) ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಭಾವಚಿತ್ರವನ್ನು ಕೈಯಲ್ಲಿ ಪಡೆಯಲು ಸಾಧ್ಯವಾಗಿಲ್ಲ’ ಎಂದು ತಿಳಿಸಿದ್ದಾರೆ.
ಏನಾಗಿತ್ತು?:
ಲಾಲೂ ಪ್ರಸಾದ್ ಈ ವಾರ ತಮ್ಮ 78ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸೋಫಾದ ಮೇಲೆ ಕೂತಿದ್ದು, ಅವರ ಬೆಂಬಲಿಗರು ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಬಂದು ಅವರ ಪಾದದ ಕೆಳಗಡೆ ಇಡುತ್ತಾರೆ. ನಂತರ ಲಾಲೂ ಅವರ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.