ADVERTISEMENT

ನೌಗಮ್‌ ಸ್ಫೋಟ ಆಕಸ್ಮಿಕ | ವಿಧ್ವಂಸಕ ಕೃತ್ಯವಲ್ಲ: ಜಮ್ಮು–ಕಾಶ್ಮೀರ DGP ಸ್ಪಷ್ಟನೆ

ಪಿಟಿಐ
Published 15 ನವೆಂಬರ್ 2025, 6:58 IST
Last Updated 15 ನವೆಂಬರ್ 2025, 6:58 IST
   

ಶ್ರೀನಗರ: ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕ. ಇದು ವಿಧ್ವಂಸಕ ಕೃತ್ಯವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

‌‌ವೈಟ್ ಕಾಲರ್ ಭಯೋತ್ಪಾದಕ ಜಾಲ ಪ್ರಕರಣದ ತನಿಖೆಯ ವೇಳೆ ವಶಪಡಿಸಿಕೊಂಡಿದ್ದ ಸ್ಫೋಟಕಗಳನ್ನು ಹರಿಯಾಣದ ಫರೀದಾಬಾದ್‌ನಿಂದ ನೌಗಮ್ ಪೊಲೀಸ್ ಠಾಣೆಗೆ ಸಾಗಿಸಲಾಗಿತ್ತು. ಅವುಗಳನ್ನು ಠಾಣೆಯ ಆವರಣದ ತೆರೆದ ಪ್ರದೇಶದಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು

ನಿಗದಿತ ಕಾರ್ಯವಿಧಾನದ ಭಾಗವಾಗಿ, ವಶಪಡಿಸಿಕೊಂಡ ಸ್ಫೋಟಕಗಳ ಮಾದರಿಗಳನ್ನು ವಿಧಿವಿಜ್ಞಾನ ಮತ್ತು ರಾಸಾಯನಿಕ ಪರೀಕ್ಷೆಗೆ ಕಳುಹಿಸಬೇಕಾಗಿತ್ತು. ಅವುಗಳ ಗಾತ್ರ ಹೆಚ್ಚಿದ ಕಾರಣ, ಎಫ್‌ಎಸ್‌ಎಲ್ (ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ) ತಂಡವು ಕಳೆದ ಎರಡು ದಿನಗಳಿಂದ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ನಡೆಸುತ್ತಿದೆ. ದುರದೃಷ್ಟವಶಾತ್ ಈ ವೇಳೆ (ಮಾದರಿ ಸಂಗ್ರಹ ಪ್ರಕ್ರಿಯೆ) ನಿನ್ನೆ (ಶುಕ್ರವಾರ) ರಾತ್ರಿ 11.20ರ ಸುಮಾರಿಗೆ, ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ ಎಂದು ಪ್ರಭಾತ್ ಹೇಳಿದ್ದಾರೆ.

ADVERTISEMENT

ಸ್ಫೋಟದಲ್ಲಿ 9 ಮಂದಿ ಮೃತಪಟ್ಟು, 32 ಜನ ಗಾಯಗೊಂಡಿದ್ದಾರೆ. ‌ರಾಜ್ಯ ತನಿಖಾ ಸಂಸ್ಥೆಯ (ಎಸ್‌ಐಎ) ಒಬ್ಬ ಸಿಬ್ಬಂದಿ, ಎಫ್‌ಎಸ್‌ಎಲ್ ತಂಡದ ಮೂವರು ಸಿಬ್ಬಂದಿ, ಇಬ್ಬರು ಛಾಯಾಗ್ರಾಹಕರು, ಮ್ಯಾಜಿಸ್ಟ್ರೇಟ್ ತಂಡದ ಭಾಗವಾಗಿದ್ದ ಇಬ್ಬರು ಕಂದಾಯ ಅಧಿಕಾರಿಗಳು ಮತ್ತು ತಂಡದೊಂದಿಗೆ ಇದ್ದ ಒಬ್ಬ ದರ್ಜಿ ಮೃತಪಟ್ಟಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.

ಘಟನೆಯಲ್ಲಿ 27 ಪೊಲೀಸ್ ಸಿಬ್ಬಂದಿ, ಇಬ್ಬರು ಕಂದಾಯ ಅಧಿಕಾರಿಗಳು ಮತ್ತು ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಠಾಣೆ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಜತೆಗೆ ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.