ADVERTISEMENT

ಸ್ಟ್ಯಾನ್ ಸ್ವಾಮಿ ಇರುವ ಜೈಲಿಗೆ ಸ್ಟ್ರಾ, ಸಿಪ್ಪರ್ ಕಳುಹಿಸಲು ಮುಂದಾದ ಸಂಸ್ಥೆ

ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿರುವ ಬಂಧಿತ ಸ್ಟ್ಯಾನ್ ಸ್ವಾಮಿ ಮನವಿ ತಿರಸ್ಕೃತ

ಪಿಟಿಐ
Published 28 ನವೆಂಬರ್ 2020, 9:29 IST
Last Updated 28 ನವೆಂಬರ್ 2020, 9:29 IST
ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಸ್ಟ್ಯಾನ್ ಸ್ವಾಮಿ ಬಂಧನ ವಿರೋಧಿಸಿ ಈಚೆಗೆ ಪಾದ್ರಿಗಳು ಸಿಕಂದರಾಬಾದ್‌ನಲ್ಲಿ ಪ್ರತಿಭಟಿಸಿದ್ದರು
ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಸ್ಟ್ಯಾನ್ ಸ್ವಾಮಿ ಬಂಧನ ವಿರೋಧಿಸಿ ಈಚೆಗೆ ಪಾದ್ರಿಗಳು ಸಿಕಂದರಾಬಾದ್‌ನಲ್ಲಿ ಪ್ರತಿಭಟಿಸಿದ್ದರು   

ನವದೆಹಲಿ: ಸದ್ಯ ಜೈಲಿನಲ್ಲಿ ಇರುವ ಬುಡಕಟ್ಟು ಸಮುದಾಯದ ಹೋರಾಟಗಾರ, ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿರುವ ಸ್ಟ್ಯಾನ್ ಸ್ವಾಮಿ ಅವರಿಗೆ ನೀರು ಕುಡಿಯುವ ಪರಿಕರ (ಸಿಪ್ಪರ್ ಮತ್ತು ಸ್ಟ್ರಾ) ಪೂರೈಸಲು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್‌ಪಿಆರ್‌ಡಿ ನಿರ್ಧರಿಸಿದೆ. ಇತರೆ ಸಂಘಟನೆಗಳೂ ಇಂಥ ಕಾರ್ಯಕ್ಕೆ ಮುಂದಾಗುವಂತೆ ಕೋರಿದೆ.

83 ವರ್ಷದ ಸ್ಟ್ಯಾನ್ ಸ್ವಾಮಿ ಅವರನ್ನು ಅಕ್ಟೋಬರ್ 8ರಂದು ರಾಂಚಿಯ ಅವರ ನಿವಾಸದಿಂದ ಎಲ್ಗಾರ್ ಪರಿಷತ್‌ ಪ್ರಕರಣದ ಸಂಬಂಧ ಬಂಧಿಸಲಾಗಿದ್ದು, ಮುಂಬೈನ ತಲೋಜಾ ಜೈಲಿನಲ್ಲಿ ಇಡಲಾಗಿದೆ.

ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವ ತಮಗೆ ಲೋಟ ಹಿಡಿಯಲಾಗದು. ಹೀಗಾಗಿ, ಸ್ಟ್ರಾ ಅಥವಾ ಸಿಪ್ಪರ್ ಒದಗಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಪ್ರತಿಕ್ರಿಯೆ ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸೂಚಿಸಿತ್ತು. ಅರ್ಜಿಯು ವಿಚಾರಣೆ ಡಿ.4ರಂದು ನಡೆಯಲಿದೆ.

ಈ ಮೊದಲು ತನಿಖಾ ಸಂಸ್ಥೆಯು ಅರ್ಜಿದಾರರ ಮನವಿ ಕುರಿತು ಪ್ರತಿಕ್ರಿಯಿಸಲು 20 ದಿನದ ಅವಧಿ ಕೋರಿತ್ತು. ಬಳಿಕ ಕಾರ್ಯಕರ್ತ ತನ್ನ ಅರ್ಜಿಯಲ್ಲಿ ತಿಳಿಸಿರುವಂತೆ, ಅವರನ್ನು ಬಂಧಿಸುವ ಸಂದರ್ಭದಲ್ಲಿ ಇವುಗಳನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿತ್ತು.

ಇದರ ಬೆನ್ನಲ್ಲೇ ಜೈಲಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸಲು ಮುಂದಾಗಿರುವ ಸೇವಾ ಸಂಸ್ಥೆ ಎನ್‌ಪಿಆರ್‌ಡಿ, ಇನ್ನಷ್ಟು ದಿನ ಸ್ವಾಮಿ ಅವರು ಈ ನೋವನ್ನು ಸಹಿಸಿಕೊಳ್ಳಲಾಗದು. ದೀರ್ಘ ಕಾಲ ಅವರು ದ್ರವ ಪದಾರ್ಥ ಸೇವಿಸದಂತೆ ನಿರಾಕರಿಸಲೂ ಆಗದು. ಹೀಗಾಗಿ, ಜೈಲಿಗೆ ಇವುಗಳನ್ನು ಕಳುಹಿಸುತ್ತಿದ್ದೇವೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.