ADVERTISEMENT

ಎನ್‌ಆರ್‌ಸಿ: 19 ಲಕ್ಷ ಜನರ ಭವಿಷ್ಯ ಅತಂತ್ರ

ಪಿಟಿಐ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
   

ಗುವಾಹಟಿ:ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿಯಿಂದ ಹೊರಗೆ ಉಳಿದಿರುವ 19 ಲಕ್ಷಕ್ಕೂ ಹೆಚ್ಚು ಜನರ ಭವಿಷ್ಯ ಆತಂಕದಲ್ಲಿದೆ. ‘ನಮ್ಮನ್ನು ಭಾರತದಲ್ಲೇ ಉಳಿಸಿಕೊಳ್ಳಲಾಗುತ್ತದೆಯೇ ಅಥವಾ ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆಯೇ’ ಎಂಬ ಪ್ರಶ್ನೆ ಈ ಜನರಲ್ಲಿ ಮನೆ ಮಾಡಿದೆ.

‘ಪಟ್ಟಿಯಿಂದ ಹೊರಗೆ ಇರುವವರು ಮುಂದಿನ 120 ದಿನಗಳ ಒಳಗೆ ವಿದೇಶಿಯರ ನ್ಯಾಯಂಡಳಿಯಲ್ಲಿ ಅರ್ಜಿ ಸಲ್ಲಿಸಬೇಕು. ಅದನ್ನು ನ್ಯಾಯಮಂಡಳಿಯು ಪರಿಶೀಲಿಸಲಿದೆ. ಪರಿಶೀಲನೆಯ ನಂತರವೂ ಅವರನ್ನು ವಿದೇಶಿಯರು (ಅಕ್ರಮ ವಲಸಿಗರು) ಎಂದೇ ನ್ಯಾಯಮಂಡಳಿ ಘೋಷಿಸಿದರೆ ಅಂತಹವರನ್ನು ಬಂಧಿಸಿ, ಶಿಬಿರಕ್ಕೆ ಕಳುಹಿಸಲಾಗುತ್ತದೆ’ ಎಂದು ಎನ್‌ಆರ್‌ಸಿ ರಾಜ್ಯ ಸಂಯೋಜಕರ ಕಚೇರಿ ತಿಳಿಸಿದೆ.

‘ಈ ವಿದೇಶಿಯರು ಅಥವಾ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಕಳುಹಿಸಬೇಕೇ ಎಂಬುದನ್ನಯು ಇನ್ನಷ್ಟೇ ನಿರ್ಧರಿಸಬೇಕಿದೆ. ಕೇಂದ್ರ ಸರ್ಕಾರವು ಇದನ್ನು ನಿರ್ಧರಿಸಲಿದೆ. ಆದರೆ ಇವರನ್ನು ಸ್ವೀಕರಿಸಲು ಬಾಂಗ್ಲಾ ಸರ್ಕಾರ ಸಿದ್ಧವಿದೆಯೇ ಎಂಬುದೂ ನಿರ್ಣಾಯಕ ಅಂಶವಾಗಲಿದೆ’ ಎಂದು ಎನ್‌ಆರ್‌ಸಿ ರಾಜ್ಯ ಸಂಯೋಜಕರ ಕಚೇರಿಯ ಮೂಲಗಳು ಹೇಳಿವೆ.

ADVERTISEMENT

ಈಗ ಇಂತಹ ನಿರಾಶ್ರಿತರನ್ನು ರಾಜ್ಯದ ಆರು ಜಿಲ್ಲಾ ಕಾರಾಗೃಹಗಳಲ್ಲಿ ಇರಿಸಲಾಗಿದೆ. ಅವುಗಳ ಸಾಮರ್ಥ್ಯ ಕಡಿಮೆ. ಹೀಗಾಗಿ ಪ್ರತ್ಯೇಕವಾಗಿ ಹತ್ತು ಶಿಬಿರಗಳನ್ನು ನಿರ್ಮಿಸುವ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಇಂತಹ ಪ್ರತಿ ಶಿಬಿರವೂ 3,000 ಜನರಿಗೆ ವಸತಿ ಕಲ್ಪಿಸುವ ಸಾಮರ್ಥ್ಯ ಹೊಂದಿರಲಿವೆ.

ಪರಿಷ್ಕರಣೆಗೆ ಒತ್ತಾಯ:ಎನ್‌ಆರ್‌ಸಿ ಪರಿಷ್ಕರಣೆಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ‘ಅಸ್ಸಾಂ ಪಬ್ಲಿಕ್ ವರ್ಕ್ಸ್‌–ಎಪಿಡಬ್ಲ್ಯು’ ಎನ್‌ಆರ್‌ಸಿ ಅಂತಿಮಪಟ್ಟಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ರಾಜ್ಯದಲ್ಲಿ 41 ಲಕ್ಷ ಜನ ಅಕ್ರಮ ವಲಸಿಗರಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಕೇವಲ 19 ಲಕ್ಷ ಜನರನ್ನು ಹೊರಗಿಡಲಾಗಿದೆ. ಪರಿಷ್ಕರಣೆಗೆ ಬಳಸಿದ ತಂತ್ರಾಂಶವೇ ಸರಿಯಿಲ್ಲ. ಎನ್‌ಆರ್‌ಸಿ ಸರಿಯಾಗುವ ವಿಶ್ವಾಸವೇ ಇಲ್ಲ’ ಎಂದು ಎಪಿಡಬ್ಲ್ಯು ಅಸಮಾಧಾನ ವ್ಯಕ್ತಪಡಿಸಿದೆ.

ಮೇಲ್ಮನವಿಗೆ ಸಿದ್ಧತೆ

‘ಮತ್ತಷ್ಟು ಜನರನ್ನು ಪಟ್ಟಿಯಿಂದ ಹೊರಗಿಡ ಬೇಕಿತ್ತು. ಈ ಪಟ್ಟಿಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ. ನಮ್ಮ ನೆಲದಲ್ಲೇ ನಾವು ಪರಕೀಯರಾಗಲು ನಾವು ಸಿದ್ಧರಿಲ್ಲ’ ಎಂದು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಹೇಳಿದೆ.

‘ಪಟ್ಟಿ ಸರಿಯಾಗಿಲ್ಲ’

‘ಈ ಪಟ್ಟಿಯಿಂದ ನಮಗೆ ತೀವ್ರ ಅಸಮಾ ಧಾನವಾಗಿದೆ. ನಿಜವಾದ ಭಾರತೀಯರನ್ನೂ ಪಟ್ಟಿಯಿಂದ ಹೊರಗೆ ಇಡಲಾಗಿದೆ. ಇದು ಸರಿಯಲ್ಲ’ ಎಂದು ಅಸ್ಸಾಂ ಕಾಂಗ್ರೆಸ್‌ ಶಾಸಕ ಅಬ್ದುಲ್ ಖಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಗಿ ಭದ್ರತೆ

ಈ ಹಿಂದೆ ಎನ್‌ಆರ್‌ಸಿ ಪಟ್ಟಿ ಬಿಡುಗಡೆ ಮಾಡಿ ದಾಗಲೆಲ್ಲಾ ಹಿಂಸಾಚಾರ ನಡೆದಿತ್ತು. ಹೀಗಾಗಿ ಈಗ ರಾಜ್ಯದಲ್ಲಿ ಹೆಚ್ಚುವರಿಯಾಗಿ 20 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.