ADVERTISEMENT

ಹಲ್ದವಾನಿ ಹಿಂಸಾಚಾರ | ಕಿಡಿಗೇಡಿಗಳ ವಿರುದ್ಧ NSA ಅಡಿ ಕ್ರಮ: ಉತ್ತರಾಖಂಡ ಡಿಜಿಪಿ

ಪಿಟಿಐ
Published 9 ಫೆಬ್ರುವರಿ 2024, 13:36 IST
Last Updated 9 ಫೆಬ್ರುವರಿ 2024, 13:36 IST
<div class="paragraphs"><p>ಉತ್ತರಾಖಂಡದ ಹಲ್ದವಾನಿಯಲ್ಲಿ ನಡೆದ ಗಲಭೆಯ ದೃಶ್ಯ</p></div>

ಉತ್ತರಾಖಂಡದ ಹಲ್ದವಾನಿಯಲ್ಲಿ ನಡೆದ ಗಲಭೆಯ ದೃಶ್ಯ

   

ಪಿಟಿಐ ಚಿತ್ರ

ಡೆಹರಾಡೂನ್‌: ನೈನಿತಾಲ್‌ ಜಿಲ್ಲೆಯ ಹಲ್ದವಾನಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಅಭಿನವ್‌ ಕುಮಾರ್‌ ಶುಕ್ರವಾರ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎ.‍ಪಿ. ಅನ್ಶುಮನ್‌ ಅವರೊಂದಿಗೆ ಭೇಟಿ ನೀಡಿದ ಅಭಿನವ್, ಪರಿಸ್ಥಿತಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಪೊಲೀಸರ ಮೇಲೆ ದಾಳಿ ಮಾಡಿದ ಹಾಗೂ ಬಂಭೂಲ್ಪುರದಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿ ಪುಂಡಾಟಿಕೆ ಮೆರೆದವರ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕರ್ಫ್ಯೂ ಜಾರಿಗೊಳಿಸುವ ಮೂಲಕ ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ಮುಂದಿನ 24 ಗಂಟೆಗಳಲ್ಲಿ ಪಟ್ಟಣವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ ಎಂದು ಅಭಿನವ್‌ ಕುಮಾರ್‌ ಹೇಳಿದ್ದಾರೆ.

ಜಿಲ್ಲಾಡಳಿತದೊಂದಿಗೆ ಹಲ್ದವಾನಿಯಲ್ಲಿ ಸಭೆ ನಡೆಸಿದ ಅವರು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ, ಗಾಯಾಳು ಪೊಲೀಸರನ್ನು ದಾಖಲಿಸಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿದರು.

ಮುಸ್ಲಿಂ ಬಾಹುಳ್ಯವಿರುವ ಬಂಭೂಲ್ಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮದರಸಾ ಹಾಗೂ ಪ್ರಾರ್ಥನಾ ಸ್ಥಳವನ್ನು ಗುರುವಾರ ತೆರವುಗೊಳಿಸುವ ಸಂದರ್ಭದಲ್ಲಿ ಗಲಭೆ ನಡೆದಿದೆ. ಈ ವರೆಗೆ ಕನಿಷ್ಠ 4 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣದ ಬೆನ್ನಲ್ಲೇ ರಾಜ್ಯದಾದ್ಯಂತ ಕಟ್ಟೆಚ್ಚರಕ್ಕೆ ಕರೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.