ADVERTISEMENT

ನಾಯಿ ಮಾಂಸ ಸೇವನೆ ನಿಷೇಧಕ್ಕೆ ಎನ್ಎಸ್‌ಸಿಎನ್ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 11:22 IST
Last Updated 25 ಜುಲೈ 2020, 11:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಾಹಟಿ:ನಾಯಿಗಳ ಮಾಂಸ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ಎನ್ಎಸ್‌ಸಿಎನ್ (ಐಎಂ) ಬಂಡಾಯ ಸಂಘಟನೆ, ಆಹಾರ ಸಂಸ್ಕೃತಿ ಮೇಲೆ ನಿಷೇಧ ಹೇರುವುದಾಗಲಿ, ಹಸ್ತಕ್ಷೇಪ ಮಾಡುವುದಾಗಲಿ ಮಾಡಬಾರದು ಎಂದು ಕಟುವಾಗಿ ಹೇಳಿದೆ.

ಸ್ಥಳೀಯ ನಾಗಾ ಸಮುದಾಯದ ಸಂಸ್ಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ನಾಯಿ ಮಾಂಸವನ್ನು ನಿಷೇಧಿಸುವ ತುರ್ತು ಏನಿತು ಎಂದು ಸಂಘಟನೆ ಪ್ರಶ್ನಿಸಿದೆ.

ನಾಗಾ ಸಮುದಾಯದವರ ಮುಖಚಹರೆ ವಿಭಿನ್ನವಾಗಿರುವಂತೆ ಅವರ ಆಹಾರ ಸಂಸ್ಕೃತಿಯೂ ಭಿನ್ನವಾಗಿದೆ. ಜನಾಂಗೀಯ ಮತ್ತು ಸಾಂಸ್ಕೃತಿಕವಾಗಿ ನಾಗ ಸಮುದಾಯದವರು ಭಾರತದ ಇತರರಿಗಿಂತ ವಿಭಿನ್ನವಾಗಿದ್ದಾರೆ.ನಮ್ಮ ನಾಗರಿಕತೆ ಮೂಲ ಹಿಂದುಳಿದಿರಬಹುದು ಅಥವಾ ಆಧುನಿಕವಾಗಿರಬಹುದು, ಅದರ ಚರ್ಚೆ ಅಪ್ರಸ್ತುತವಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ನಮಗೆ ಹೆಮ್ಮೆ ಇದೆ. ನಮ್ಮ ಮೇಲೆ ಅನ್ಯ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸಬೇಡಿ. ಮೊದಲಿನಿಂದಲೂ ನಡೆದುಕೊಂಡು ಬಂದಂತೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಸಂಘಟನೆ ಹೇಳಿಕೆ ನೀಡಿದೆ.

ADVERTISEMENT

ಸರ್ಕಾರದ ಕ್ರಮ ವ್ಯಕ್ತಿಯ ನೈಸರ್ಗಿಕ ಆಹಾರ ಆಯ್ಕೆಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದೂ ಅದು ತಿಳಿಸಿದೆ.

ಯಾವುದೇ ರೀತಿಯ ಪ್ರಾಣಿ ಹಿಂಸೆಯ ಕುರಿತು ನಾಗಾ ಸಮುದಾಯಕ್ಕೂ ಕಾಳಜಿ ಇದೆ. ಆದರೆ, ಪ್ರಾಣಿಗಳ ಮೇಲಿನ ಕ್ರೌರ್ಯದ ನೆಲೆಯಲ್ಲಿ ನಾಯಿ ಮಾಂಸ ಸೇವನೆಯನ್ನು ನಿಲ್ಲಿಸುವಂತೆ ಒತ್ತಾಯಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮನೆಯಲ್ಲಿ ಯಾವ ಬಗೆಯ ಅಡುಗೆ ಮಾಡಬೇಕು ಎಂಬುದು ಮನೆಯ ಮಾಲೀಕರ ಆಯ್ಕೆಯಾಗಿರಬೇಕು. ಆ ಕುರಿತು ಅನ್ಯರು ನಿರ್ದೇಶನ ನೀಡುವ ಅಗತ್ಯವಿಲ್ಲ. ಇಂದು ನಾಯಿ ಮಾಂಸಕ್ಕೆ ನಿಷೇಧ ಹೇರಿರುವ ನೀವು ಮುಂದೆ ಬೇರೆ ಆಹಾರದ ಮೇಲೂ ನಿಷೇಧ ಹೇರಬಹುದಲ್ಲವೇ ಎಂದು ಸಂಘಟನೆ ಪ್ರಶ್ನಿಸಿದೆ.

ಪ್ರಾಣಿಗಳ ಹಿಂಸೆ ಸಂಬಂಧ ಕಳವಳ ವ್ಯಕ್ತವಾಗುತ್ತಿರುವುದನ್ನು ಪರಿಗಣಿಸಿ,ನಾಯಿಗಳ ಮಾಂಸ ಮಾರಾಟ ಹಾಗೂ ಬಳಕೆಯನ್ನು ನಾಗಾಲ್ಯಾಂಡ್‌ ಸಚಿವ ಸಂಪುಟ ಇದೇ 4ರಂದು ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.