ಬಂಧನ (ಸಾಂದರ್ಭಿಕ ಚಿತ್ರ)
ಭುವನೇಶ್ವರ: ಎನ್‌ಎಸ್‌ಯುಐ (ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ) ಒಡಿಶಾ ಘಟಕದ ಉಚ್ಚಾಟಿತ ಅಧ್ಯಕ್ಷನನ್ನು ಅತ್ಯಾಚಾರ ಪ‍್ರಕರಣದಲ್ಲಿ ಬಂಧಿಸಿದ ಬೆನ್ನಲ್ಲೇ ಬುಧವಾರ ಆತನ ಸಹಚರನನ್ನೂ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಆಯುಷ್ಮಾನ್ ಸಾಹು ಎಂದು ಗುರುತಿಸಲಾಗಿದೆ.
ಎನ್‌ಎಸ್‌ಯುಐನ ಉಚ್ಚಾಟಿತ ಅಧ್ಯಕ್ಷನಾಗಿರುವ ಉದಿತ್ ಪ್ರಧಾನ್, ಮಾರ್ಚ್ 18ರಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ 19ರ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರವೇ ಉದಿತ್‌ನನ್ನು ಬಂಧಿಸಲಾಗಿತ್ತು.
ಬಳಿಕ ಪೊಲೀಸರು ಮತ್ತು ನ್ಯಾಯಾಲಯದ ಎದುರು ಹೇಳಿಕೆ ನೀಡುವಾಗ ಸಂತ್ರಸ್ತೆ, ಉದಿತ್ ಜತೆಗೆ ಸಾಹು ಕೂಡ ಅತ್ಯಾಚಾರ ಎಸಗಿದ್ದಾನೆಂದು ಹೇಳಿದ್ದಾರೆ. ಈ ಕಾರಣದಿಂದ ಆಯುಷ್ಮಾನ್‌ನನ್ನೂ ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದೂ ಹೇಳಿದ್ದಾರೆ.
ಉದಿತ್ ಮೇಲೆ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆಯೇ ಎನ್‌ಎಸ್‌ಯುಐನಿಂದ ಆತನನ್ನು ಉಚ್ಚಾಟಿಸಲಾಗಿದೆ. ಮತ್ತೊಂದೆಡೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಒಡಿಶಾ ಘಟಕದ ಮುಖ್ಯಸ್ಥ ಭಕ್ತ ಚರಣ್ ದಾಸ್ ಅವರೊಂದಿಗೆ ಆರೋಪಿ ಉದಿತ್ ಇರುವಂಥ ಫೋಟೋಗಳನ್ನು ಭುವನೇಶ್ವರದ ಹಲವೆಡೆ ಅಂಟಿಸಲಾಗಿದ್ದು, ಎನ್‌ಎಸ್‌ಯುಐ ಕಾರ್ಯಕರ್ತರು ಅವುಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.