ನವದೆಹಲಿ: ನೀಟ್–ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ಹರಡಿದ 106 ಟೆಲಿಗ್ರಾಂ, 16 ಇನ್‌ಸ್ಟಾಗ್ರಾಂ ಚಾನೆಲ್‌ಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಪತ್ತೆಹಚ್ಚಿದೆ.
ವೈದ್ಯಕೀಯ ಕೋರ್ಸ್‌ಗಳ ಮುಂಬರುವ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು 1,500ಕ್ಕೂ ಅಧಿಕ ದೂರುಗಳು ಎನ್‌ಟಿಎಗೆ ಬಂದಿದ್ದವು. ನೀಟ್–ಯುಜಿ ಪರೀಕ್ಷಾ ಪ್ರಕ್ರಿಯೆ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಎನ್‌ಟಿಎ ಈ ಕ್ರಮ ಕೈಗೊಂಡಿದೆ. ಪ್ರಶ್ನೆಪತ್ರಿಕೆ ಲಭ್ಯವಿದೆ ಎಂದು ತಪ್ಪು ಮಾಹಿತಿ ನೀಡಿದ ಚಾನೆಲ್‌ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದೆ.
‘ತಪ್ಪು ಮಾಹಿತಿ ಹಂಚಿ, ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿದ 106 ಟೆಲಿಗ್ರಾಂ ಹಾಗೂ 16 ಇನ್‌ಸ್ಟಾಗ್ರಾಂ ಚಾನೆಲ್‌ಗಳನ್ನು ಗುರುತಿಸಲಾಗಿದೆ. ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಲು ಗೃಹ ಸಚಿವಾಲಯದ ಅಧೀನದಲ್ಲಿರುವ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಎನ್‌ಟಿಎ ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪು ಮಾಹಿತಿ ಹಂಚಿ, ಪರೀಕ್ಷಾ ಆಕಾಂಕ್ಷಿಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಚಾನೆಲ್‌ಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಂ ಸಂಸ್ಥೆಗೂ ಎನ್‌ಟಿಎ ಮನವಿ ಮಾಡಿಕೊಂಡಿದೆ.
ಮೇ 4ರಂದು ನೀಟ್–ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.