ADVERTISEMENT

ಬಾಲಾಕೋಟ್‌ನಲ್ಲಿ 300 ಮೊಬೈಲ್‌ ಸಕ್ರಿಯವಾಗಿದ್ದನ್ನು ದೃಢಪಡಿಸಿತ್ತು ಎನ್‌ಟಿಆರ್‌ಒ

ಏಜೆನ್ಸೀಸ್
Published 5 ಮಾರ್ಚ್ 2019, 3:10 IST
Last Updated 5 ಮಾರ್ಚ್ 2019, 3:10 IST
   

ನವದೆಹಲಿ:ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ ನಿಖರ ದಾಳಿಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಮಾಹಿತಿಯೊಂದನ್ನು ಎನ್‌ಟಿಆರ್‌ಒ ನೀಡಿದೆ.

ಫೆ.26ರಂದು ಬಾಲಾಕೋಟ್‌ನಲ್ಲಿ ಜೈಷ್‌ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸುವ ಮುನ್ನ ಅಲ್ಲಿ 300 ಮೊಬೈಲ್‌ ಪೋನ್‌ಗಳು ಕಾರ್ಯ ಪ್ರವೃತ್ತವಾಗಿದ್ದವು ಎಂದು ಭಾರತೀಯ ಗುಪ್ತಚರ ಸಂಸ್ಥೆಗಳ ತಾಂತ್ರಿಕ ಕಣ್ಗಾವಲು ವಿಭಾಗ ಪತ್ತೆ ಮಾಡಿತ್ತು. ಈ ಮೂಲಕ ದಾಳಿ ನಡೆದ ಸ್ಥಳದಲ್ಲಿದ್ದವರ ಒಟ್ಟು ಸಂಖ್ಯೆಯ ಸ್ಪಷ್ಟವಾದ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ದಾಳಿಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದು ತಮ್ಮ ಕೆಲಸ ಅಲ್ಲ. ಗುರಿಯ ಮೇಲೆ ನಿಖರ ದಾಳಿ ನಡೆಸುವುದಷ್ಟೇ ತಮ್ಮ ಕರ್ತವ್ಯ. ಸಾವಿನ ವಿವರಗಳನ್ನು ಸರ್ಕಾರ ನೀಡಬೇಕು ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್‌. ಧನೋಆ ಅವರು ಸೋಮವಾರ ಖಡಕ್‌ ತಿರುಗೇಟು ನೀಡಿದ ಬಳಿಕ ಈ ವರದಿ ಹೊರಬಿದ್ದಿದೆ.

ADVERTISEMENT

ಪಾಕಿಸ್ತಾನದ ಖೈಬರ್ ಪಖ್ತನ್ಖ್ವಾ ಪ್ರಾಂತ್ಯದಲ್ಲಿನ ಉಗ್ರರ ಶಿಬಿರವನ್ನು ಗುರಿಯಾಗಿರಿಸಿ ದಾಳಿ ನಡೆಸುವ ಕುರಿತು ಭಾರತೀಯ ವಾಯುಪಡೆ ಪರವಾನಗಿ ನೀಡಿದ ಬಳಿಕ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ನ್ಯಾಷನಲ್‌ ಟೆಕ್ನಿಕಲ್‌ ರೀಸರ್ಚ್‌ ಆರ್ಗನೈಜೇಷನ್–ಎನ್‌ಟಿಆರ್‌ಒ) ಅಲ್ಲಿರುವ ಸೌಲಭ್ಯಗಳ ಕಣ್ಗಾವಲು ಪ್ರಾರಂಭಿಸಿತು ಎಂದು ಮೂಲಗಳು ತಿಳಿಸಿವೆ.

ಫೆ.26ರಂದು ಭಾರತೀಯ ವಾಯುಪಡೆಯ ಮೀರಜ್‌ 2000 ಜೆಟ್‌ಗಳು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಪ್ರವೇಶಿಸಿ ಬಾಲಾಕೋಟ್‌ನ ಜೈಷ್‌ ಶಿಬಿರದಲ್ಲಿ ಉಗ್ರರು, ಸಂಘಟನೆ ಮುಖಂಡರು ತಂಗಿದ್ದ ಹಾಗೂ ಸ್ಫೋಟಕ ಸಾಮಗ್ರಿಗಳಿದ್ದ ನಿವಾಸದ ಮೇಲೆ ಒಂದು ಸಾವಿರ ಕೆ.ಜಿ. ತೂಕದ ಸ್ಪೈಸ್‌ 2000 ಬಾಂಬ್‌ಗಳನ್ನು ಹಾಕಿ ಧ್ವಂಸ ಗೊಳಿಸಿದೆ.

‘ತಂತ್ರಜ್ಞಾನ ಕಣ್ಗಾವಲು ಇರಿಸಿದ ಸಂದರ್ಭದಲ್ಲಿ ತಾಂತ್ರಿಕ ಸೌಲಭ್ಯಗಳಿದ್ದ ಆ ಸ್ಥಳದಲ್ಲಿ ಸರಿ ಸುಮಾರು 300 ಮೊಬೈಲ್‌ ಪೋನ್‌ಗಳು ಕಾರ್ಯಪ್ರವೃತ್ತವಾಗಿರುವುದು ಪತ್ತೆಯಾಯಿತು. ಅದೇ ದಿನ ದಾಳಿ ನಡೆಸಿದ ಭಾರತೀಯ ವಾಯುಪಡೆ ಶಿಬಿರವನ್ನು ಧ್ವಂಸಗೊಳಿಸಿದೆ’ ಎಂದು ಕಾರ್ಯಾಚರಣೆಲ್ಲಿ ತೊಡಗಿದ್ದ ಹೆಸರು ಹೇಳಲಿಚ್ಚಿಸದ ಮೂಲಗಳು ತಿಳಿಸಿದ್ದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಬಾಲಕೋಟ್‌ನಲ್ಲಿ ಜೈಷ್‌ ಸಂಘಟನೆ ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದ ಮೊಬೈಲ್‌ ಸಂಖ್ಯೆಗಳು ಕಾರ್ಯಪ್ರವೃತ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತೀಯ ಗುಪ್ತಚರ ಇಲಾಖೆಯ ಇತರ ಸಂಸ್ಥೆಗಳು ಎನ್‌ಟಿಆರ್‌ಒಗೆ ಕೈ ಜೋಡಿದ್ದವು ಎಂದು ಅವರು ಹೇಳಿದ್ದಾರೆ.

ದಾಳಿಯಲ್ಲಿ ಮೃತಪಟ್ಟರವ ಸಂಖ್ಯೆಯನ್ನು ಸರ್ಕಾರ ಈ ವರೆಗೆ ಘೋಷಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.