
ನವದೆಹಲಿ: ಭಾರತದ ಮೂರನೇ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿ (ಎಸ್‌ಎಸ್‌ಬಿಎನ್) ಅರಿಧಮನ್‌ನ ಪ್ರಾಯೋಗಿಕ ಪರೀಕ್ಷೆಗಳು ಅಂತಿಮ ಹಂತ ತಲುಪಿದ್ದು, ಶೀಘ್ರವೇ ಕ್ಷಿಪಣಿಯು ನೌಕಾಪಡೆಗೆ ನಿಯೋಜನೆಗೊಳ್ಳಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಅವರು ಮಂಗಳವಾರ ತಿಳಿಸಿದ್ದಾರೆ.
ನೌಕಾಪಡೆ ದಿನಕ್ಕೆ ಮುಂಚಿತವಾಗಿ ನಡೆದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ತ್ರಿಪಾಠಿ ಈ ಮಾಹಿತಿ ನೀಡಿದ್ದಾರೆ. ಅಲ್ಲದೇ, ಅಣ್ವಸ್ತ್ರ ಸಜ್ಜಿತ ಯುದ್ಧ ಜಲಾಂತರ್ಗಾಮಿ ನೌಕೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಮಿತ್ರ ರಾಷ್ಟ್ರವೊಂದರ ಜತೆಗೆ ಮಾತುಕತೆ ನಡೆಯುತ್ತಿದ್ದು, ಅದೂ ನಿರ್ಣಾಯಕ ಹಂತದಲ್ಲಿದೆ ಎಂದಿದ್ದಾರೆ.
ಸಮುದ್ರದ ಆಳದಲ್ಲಿ ಜಲಾಂತರ್ಗಾಮಿಗಳು ಅತಿಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುವ ‘ಏರ್ ಇಂಡಿಪೆಂಡೆಂಟ್ ಪ್ರೊಪಲ್ಶನ್’ ತಂತ್ರಜ್ಞಾನ ಹೊಂದಿರುವ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ನಿಟ್ಟಿನಲ್ಲೂ ಮಾತುಕತೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಚೀನಾದ ಯುವಾನ್ ಜಲಾಂತರ್ಗಾಮಿ ಮಾದರಿಯ ಹ್ಯಾಂಗೋರ್ ಶ್ರೇಣಿಯ ಜಲಾಂತರ್ಗಾಮಿಯನ್ನು ನೌಕಾಪಡೆಗೆ ನಿಯೋಜಿಸಲು ಪಾಕಿಸ್ತಾನ ಚಿಂತನೆ ನಡೆಸಿರುವಾಗಲೇ ಭಾರತದ ನೌಕಾಪಡೆಯು ತನ್ನ ಬಲಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಾತುಕತೆಗಳನ್ನು ನಡೆಸಿರುವುದು ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.