ADVERTISEMENT

ಅಂಗನವಾಡಿ ಕೇಂದ್ರಗಳಲ್ಲಿ ‘ನ್ಯೂಟ್ರಿ– ಗಾರ್ಡನ್‌‘ ಇರಲಿ

ಕೊರೊನಾ ಸೋಂಕಿನಿಂದ ರಕ್ಷಣೆಗೆ ಇದು ಸಹಕಾರಿ : ತಜ್ಞರ ಅಭಿಮತ

ಪಿಟಿಐ
Published 27 ಸೆಪ್ಟೆಂಬರ್ 2020, 7:53 IST
Last Updated 27 ಸೆಪ್ಟೆಂಬರ್ 2020, 7:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಪೌಷ್ಟಿಕ ಆಹಾರಯುಕ್ತ ಕೈತೋಟಗಳನ್ನು (ನ್ಯೂಟ್ರಿ – ಗಾರ್ಡನ್‌) ಬೆಳೆಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದೆ.

ಈ ಕೈತೋಟಗಳು ಅಪೌಷ್ಟಿಕತೆ ವಿರುದ್ಧ ಹೋರಾಟ ನಡೆಸುವ ಜತೆಗೆ, ಮಕ್ಕಳು ಮತ್ತು ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ, ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಕೈತೋಟಗಳನ್ನು ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವಾಲಯ ತಿಳಿಸಿದೆ.

ಸರ್ಕಾರ, ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಪೌಷ್ಟಿಕ ಆಹಾರಗಳನ್ನು ಗುರುತಿಸಿದ್ದು, ಆಯಾ ಪ್ರದೇಶದ ಪೌಷ್ಟಿಕ ಆಹಾರವಾದ ಹಣ್ಣು, ತರಕಾರಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿನ ಕೈತೋಟಗಳಲ್ಲಿ ಬೆಳೆಸಬಹುದು. ಈ ಕೈತೋಟಗಳನ್ನು ‘ಪೌಷ್ಟಿಕಾಂಶಯುಕ್ತ ತೋಟಗಳು ಅಥವಾ ನ್ಯೂಟ್ರಿ ಗಾರ್ಡನ್‌‘ ಎಂದು ಕರೆಯಬಹುದು ಸರ್ಕಾರ ಹೇಳಿದೆ.

ADVERTISEMENT

ಬಿಹಾರದ ಗ್ರಾಮೀಣ ಜೀವನೋಪಾಯ ಉತ್ತೇಜನಾ ಸಮಾಜ ‘ಜೀವಿಕಾ‘ದಲ್ಲಿಆರೋಗ್ಯ, ಸ್ವಚ್ಛತೆ ಮತ್ತು ಪೋಷಕಾಂಶ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕಿ ಸೌಮ್ಯ, ‘ಕೋವಿಡ್‌ 19 ಕಾಲದಲ್ಲಿ ಪ್ರತಿ ಮನೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ‘ನ್ಯೂಟ್ರಿ ಗಾರ್ಡನ್‌‘ ಇದ್ದರೆ, ಕುಟುಂಬದಲ್ಲಿರುವ ಪ್ರತಿ ಸದಸ್ಯರು ಅದರಿಂದ ಪ್ರಯೋಜನ ಪಡೆಯಬಹುದು‘ ಎನ್ನುತ್ತಾರೆ.

‘ಮನೆಯಲ್ಲಿ ನ್ಯೂಟ್ರಿ ಗಾರ್ಡನ್ ಮಾಡಿಕೊಳ್ಳುವುದರಿಂದ, ತರಕಾರಿ ಖರೀದಿಗೆ ಜನಜಂಗುಳಿ ಇರುವ ಮಾರುಕಟ್ಟೆಗೆ ಹೋಗುವುದನ್ನು ತಪ್ಪಿಸಬಹುದು. ಜತೆಗೆ, ಹಣವೂ ಉಳಿತಾಯವಾಗುತ್ತದೆ. ನಾವೇ ಕೈತೋಟ ಮಾಡಿಕೊಳ್ಳುವುದರಿಂದ, ಸಾವಯವ ಪದ್ಧತಿಯಲ್ಲಿ ತರಕಾರಿ, ಹಣ್ಣು ಬೆಳೆದುಕೊಳ್ಳಬಹುದು. ಇದರಿಂದ ದೇಹಾರೋಗ್ಯವೂ ಉತ್ತಮವಾಗಿರುತ್ತದೆ‘ ಎಂದು ಸೌಮ್ಯ ವಿಶ್ಲೇಷಿಸುತ್ತಾರೆ.

ಜಾರ್ಖಂಡ್‌ನ ಆರೋಗ್ಯ ಮತ್ತು ಪೋಷಕಾಂಶ, ಜೀವನೋಪಾಯ ಕಾರ್ಯಕ್ರಮದ ವ್ಯವಸ್ಥಾಪಕ ಅಜಯ್‌ ಶ್ರೀವಾಸ್ತವ್, ‘ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಕೊರೊನಾ ಸೋಂಕು ಹರಡುವ ಅಪಾಯ ಕಡಿಮೆ. ಬಿ–ಕೆರೋಟಿನ್ ಮತ್ತು ಆಸ್ಕೊರ್ಬಿಕ್ ಆಮ್ಲ ಸಮೃದ್ಧವಾಗಿರುವ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇಂಥ ಅಂಶಗಳಿರುವ ತರಕಾರಿಗಳನ್ನು ನ್ಯೂಟ್ರಿ ಗಾರ್ಡನ್‌ಗಳಲ್ಲಿ ಬೆಳೆಯಬಹುದು. ಇದರಿಂದ ಜಾರ್ಖಂಡ್‌ನ‌ ಹಳ್ಳಿಗಳಲ್ಲಿರುವವರಿಗೆ ಖರ್ಚು ಕಡಿಮೆಯಾಗುತ್ತದೆ‘ ಎಂದು ಹೇಳಿದ್ದಾರೆ.

ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿರುವ ‘ಜೀವಿಕಾ‘ ಸಂಸ್ಥೆ ಆಯಾ ಸರ್ಕಾರಗಳ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡುತ್ತಿವೆ.

ಕುಂಡಗಳಲ್ಲಿ ಪಾಲಕ್‌, ಚೊಲೈನಂತಹ ತರಕಾರಿಗಳನ್ನು ಬೆಳೆಸುವುದರಿಂದ, ನಿತ್ಯ ಅಡುಗೆಗೆ ಬಳಕೆಯಾಗುತ್ತವೆ. ಈ ತರಕಾರಿಗಳು ಉತ್ತಮ ಖನಿಜಾಂಶ ಮತ್ತು ಜೀವಸತ್ವಗಳನ್ನು ಹೊಂದಿದ್ದು ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ‘ ಎಂದು ನವದೆಹಲಿಯ ಸಾರ್ವಜನಿಕ ಆರೋಗ್ಯ ಪೌಷ್ಟಿಕಾಂಶ ಮತ್ತು ಅಭಿವೃದ್ಧಿ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಶೈಲಾ ವೀರ್ ಹೇಳುತ್ತಾರೆ.

ಗರ್ಭಿಣಿ, 24 ತಿಂಗಳೊಳಗಿರುವ ವಯಸ್ಸಿನ ಮಗು ಮತ್ತು ನವವಿವಾಹಿತ ಮಹಿಳೆ ಇರುವ ಮನೆಗಳಲ್ಲಿ ಇಂಥ ನ್ಯೂಟ್ರಿ ಗಾರ್ಡನ್‌ಗಳನ್ನು ಮೊದಲು ಮಾಡಿಸಬೇಕು. ಏಕೆಂದರೆ, ಇವರೆಲ್ಲರಿಗೂ ಪೌಷ್ಟಿಕಾಂಶಯುಕ್ತ ಆಹಾರ ಬೇಕು‘ ಎಂದು ವೀರ್ ಹೇಳುತ್ತಾರೆ.

ಪ್ರಸ್ತುತ ಸೆಪ್ಟೆಂಬರ್ ತಿಂಗಳನ್ನು ಕೇಂದ್ರ ಸರ್ಕಾರ ‘ಪೋಷಣ್ ಮಾಸ‘ ಎಂದು ಘೋಷಿಸಿದೆ. ಈ ಸಂಬಂಧ ಪೌಷ್ಟಿಕ ಕೈತೋಟಗಳನ್ನು ನಿರ್ಮಾಣ ಮಾಡಲು ಒತ್ತು ನೀಢುತ್ತಿದೆ. ಮಕ್ಕಳಲ್ಲಿನ ಅಪೌಷ್ಟಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.‘

ರಾಷ್ಟ್ರೀಯ ನ್ಯೂಟ್ರಿಷಿಯನ್ ಮಿಷನ್ ಅಡಿಯಲ್ಲಿ ‘ಪೋಷಣ್ ಮಾಸ‘ ಅಭಿಯಾನ ನಡೆಸಲಾಗುತ್ತಿದೆ. ಗರ್ಭಿಣಿ ಮಹಿಳೆ ಮತ್ತು ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ನಿವಾರಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.