ADVERTISEMENT

ಯುವಕರ ಮನ ಕೆಡಿಸುತ್ತಿರುವ ಅಶ್ಲೀಲ ಜಾಹೀರಾತು: ರಾಮಗೋಪಾಲ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 18:26 IST
Last Updated 3 ಜುಲೈ 2019, 18:26 IST

ನವದೆಹಲಿ: ಅಶ್ಲೀಲ ಜಾಹೀರಾತುಗಳು ಮತ್ತು ಟಿ.ವಿ. ಕಾರ್ಯಕ್ರಮಗಳಲ್ಲಿ ಮಾಡೆಲ್‌ಗಳ ದಿರಿಸು ಜಾರಿ ಒಳ ಉಡುಪು ಗೋಚರಿಸುವ ಪ್ರಕರಣಗಳು ಯುವಕರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಿಗೆ ಇದು ಕಾರಣವಾಗುತ್ತಿದೆ ಎಂದು ಎಸ್‌ಪಿ ಮುಖಂಡ ರಾಮಗೋಪಾಲ್‌ ಯಾದವ್‌ ಹೇಳಿದ್ದಾರೆ. ಮಾಧ್ಯಮದಲ್ಲಿ ‘ನಗ್ನ ಮತ್ತು ಅಶ್ಲೀಲ’ ಪ್ರದರ್ಶನಕ್ಕೆ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು. ದೇಶವು ನೈತಿಕ ಬಿಕ್ಕಟ್ಟಿನತ್ತ ಬಹಳ ವೇಗದಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಾಹೀರಾತುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದೆ. ಹಾಗಾಗಿ ಸುದ್ದಿ ವಾಹಿನಿವೀಕ್ಷಿಸುವುದೇ ದುಸ್ತರವಾಗುತ್ತಿದೆ. ಕುಟುಂಬ ಸದಸ್ಯರ ಜತೆ ಕುಳಿತು ಸುದ್ದಿ ನೋಡಲೂ ಸಾಧ್ಯವಾಗದ ಸ್ಥಿತಿ ಇದೆ ಎಂದು ಹೇಳಿದರು.

ADVERTISEMENT

‘ಈ ಸ್ಥಿತಿಗೆ ನಾವೆಲ್ಲರೂ ಕಾರಣ. ಸಲಿಂಗ ಲೈಂಗಿಕತೆ ಮತ್ತು ವ್ಯಭಿಚಾರವನ್ನು ಕಾನೂನುಬದ್ಧಗೊಳಿಸಿದ್ದೇವೆ. ಈ ಕ್ರಮವನ್ನು ನಾವು ಆಗ ವಿರೋಧಿಸಿದ್ದೆವು. ಇದು ನಮ್ಮ ಸಂಸ್ಕೃತಿಗೆ ವಿರುದ್ಧ. ನಗ್ನ ದೇಹ ಪ್ರದರ್ಶನ ಸಾಮಾನ್ಯವಾಗಿಬಿಟ್ಟಿದೆ. ಮಾಡೆಲ್‌ಗಳು ರ‍್ಯಾಂಪ್‌ನಲ್ಲಿ ನಡೆಯುವಾಗ ದಿರಿಸು ಬಿದ್ದು ಅವರ ಒಳ ಉಡುಪು ಕಾಣಿಸುವ ಪ್ರಕರಣಗಳು ಆಗಾಗ ನಡೆಯುತ್ತಿವೆ. ಇದು ಉದ್ದೇಶಪೂರ್ವಕ’ ಎಂದು ಯಾದವ್ ಪ್ರತಿಪಾದಿಸಿದರು.

ಇಂತಹ ಹಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಕ್ಕೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.