ಇ.ಡಿ
ನವದೆಹಲಿ: ಬಹುಕೋಟಿ ಮೌಲ್ಯದ ಆಕ್ಟಾಎಫ್‌ಎಕ್ಸ್ ಪೊಂಜಿ ಹಗರಣದಲ್ಲಿ ₹2,385 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಸ್ಪ್ಯಾನಿಷ್ ಮಾಸ್ಟರ್‌ಮೈಂಡ್ ಅನ್ನು ಆ ದೇಶದಲ್ಲೇ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.
ಆಕ್ಟಾಎಫ್‌ಎಕ್ಸ್ ವಿದೇಶಿ ವಿನಿಮಯ ವೇದಿಕೆ ಮೂಲಕ ಹೆಚ್ಚಿನ ಆದಾಯದ ಸುಳ್ಳು ಭರವಸೆಯ ಮೇರೆಗೆ ಹಲವಾರು ಹೂಡಿಕೆದಾರರನ್ನು ವಂಚಿಸಿರುವ ಪ್ರಕರಣ ಇದಾಗಿದೆ.
‘ಅನಧಿಕೃತ ವಿದೇಶಿ ವಿನಿಮಯ ವೇದಿಕೆ ಆಕ್ಟಾಎಫ್‌ಎಕ್ಸ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ₹2,385 ಕೋಟಿ ಮೌಲ್ಯದ ಕ್ರಿಪ್ಟೊಕರೆನ್ಸಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶವನ್ನು ನೀಡಲಾಗಿದೆ’ ಎಂದು ಇ.ಡಿ ತಿಳಿಸಿದೆ.
ವಂಚನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಪಾವೆಲ್ ಪ್ರೊಜೊರೊವ್ ಎಂಬಾತನನ್ನು ಸ್ಪೇನ್‌ನಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅನೇಕ ದೇಶಗಳ ಮೇಲೆ ಪರಿಣಾಮ ಬೀರುವ ಸೈಬರ್ ಅಪರಾಧಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
ಜುಲೈ 2022ರಿಂದ ಏಪ್ರಿಲ್ 2023ರವರೆಗೆ ಬಹು ದೇಶ ಕಾರ್ಯಾಚರಣೆಯ ಮೂಲಕ ಆಕ್ಟಾಎಫ್‌ಎಕ್ಸ್ ಭಾರತೀಯ ಹೂಡಿಕೆದಾರರನ್ನು ₹1,875 ಕೋಟಿಯನ್ನು ವ್ಯವಸ್ಥಿತವಾಗಿ ವಂಚಿಸಿದೆ ಎಂದು ಇ.ಡಿ ತಿಳಿಸಿದೆ. ಇದು ಬಹು ದೇಶ ಕಾರ್ಯಾಚರಣೆಯ ಮೂಲಕ ಸುಮಾರು ₹800 ಕೋಟಿ ಲಾಭ ಗಳಿಸಿದೆ ಎಂದು ಇ.ಡಿ ಹೇಳಿದೆ.
ಕಂಪನಿಗೆ 2019-2024ರವರೆಗೆ ಭಾರತದಿಂದ ಒಟ್ಟು ₹5,000 ಕೋಟಿಗೂ ಹೆಚ್ಚು ಲಾಭ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹೆಚ್ಚಿನದನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ.
ಆಕ್ಟಾಎಫ್‌ಎಕ್ಸ್ ಕಂಪಮಿಯು ತನ್ನನ್ನು ಆರ್‌ಬಿಐ ಅನುಮತಿಯಿಲ್ಲದೆ ಕರೆನ್ಸಿ, ಕಮಾಡಿಟಿ ಮತ್ತು ಕ್ರಿಪ್ಟೊ ವ್ಯಾಪಾರಕ್ಕಾಗಿ ಆನ್‌ಲೈನ್ ಫಾರೆಕ್ಸ್ ವ್ಯಾಪಾರ ವೇದಿಕೆಯಾಗಿ ತೋರಿಸಿಕೊಂಡಿದೆ.
ಆರಂಭದಲ್ಲಿ ಜನರ ನಂಬಿಕೆ ಗಳಿಸಲು ಸಣ್ಣ ಪ್ರಮಾಣದ ಲಆದಾಯವನ್ನು ಕಂಪನಿ ನೀಡಿದೆ ಎಂದು ಇ.ಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.