ADVERTISEMENT

ರಾಹುಲ್‌ ಗಾಂಧಿ ಕೈಗೆ ಸಿಗರು: ಕಾಂಗ್ರೆಸ್‌ ಮುಖಂಡನಿಂದಲೇ ಟೀಕೆ

ಎಐಸಿಸಿ ಅಧ್ಯಕ್ಷ ಖರ್ಗೆ ಕಾರ್ಯವೈಖರಿ ವಿರುದ್ಧವೂ ಅಸಮಾಧಾನ

ಪಿಟಿಐ
Published 12 ಡಿಸೆಂಬರ್ 2025, 23:30 IST
Last Updated 12 ಡಿಸೆಂಬರ್ 2025, 23:30 IST
-
-   

ಭುವನೇಶ್ವರ: ‘ಪಕ್ಷದ ನಾಯಕ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ರಾಹುಲ್‌ ಗಾಂಧಿ ಅವರನ್ನು ಕಾರ್ಯಕರ್ತರು ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ವತಃ ನಾನೇ ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ, ಅವರ ಭೇಟಿಗೆ ಅವಕಾಶ ಸಿಗುತ್ತಿಲ್ಲ’ ಎಂದು ಒಡಿಶಾದ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕರೊಬ್ಬರು ಟೀಕಿಸಿದ್ದಾರೆ.

ಮಾಜಿ ಶಾಸಕ ಮೊಹಮ್ಮದ್‌ ಮೊಕಿಮ್‌ ಅಸಮಾಧಾನ ಹೊರಹಾಕಿದ್ದು, ಈ ಕುರಿತು ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಬಾರಾಬತಿ–ಕಟಕ್‌ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮೊಹಮ್ಮದ್‌ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದೇ ಹೆಸರಾಗಿದ್ದು, ಸುದೀರ್ಘ ಕಾಲದಿಂದಲೂ ಕಾಂಗ್ರೆಸ್‌ನಲ್ಲಿದ್ದಾರೆ. ಅವರ ಮಗಳು ಸದ್ಯ ಶಾಸಕಿಯಾಗಿದ್ದಾರೆ.

ADVERTISEMENT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಹಾಗೂ ಕಾರ್ಯವೈಖರಿಯನ್ನು ಕೂಡ ಅವರು ಪ್ರಶ್ನಿಸಿದ್ದಾರೆ.

‘ಪಕ್ಷದ ನಾಯಕತ್ವ ಹಾಗೂ ತಳಮಟ್ಟದ ಕಾರ್ಯಕರ್ತರ ನಡುವಿನ ಅಂತರ ಹೆಚ್ಚುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಯುವ ಜನರ ಸಂಖ್ಯೆ ಶೇ 65ರಷ್ಟಿದೆ. 83 ವರ್ಷದ ಖರ್ಗೆ ಅವರಿಗೆ ದೇಶದ ಯುವ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಜ್ಯೋತಿರಾದಿತ್ಯ ಸಿಂಧಿಯಾ, ಮಿಲಿಂದ್ ದೇವರ, ಹಿಮಂತ ಬಿಶ್ವ ಶರ್ಮಾ, ಜೈವೀರ ಶೆರ್ಗಿಲ್ ಸೇರಿ ಅನೇಕ ಭರವಸೆಯ ನಾಯಕರು ಪಕ್ಷ ತೊರೆದಿದ್ದಾರೆ. ನಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ನಮ್ಮ ಮಾತುಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬ ಭಾವನೆ ಮೂಡಿದ್ದರಿಂದಲೇ ಅವರು ಪಕ್ಷ ತೊರೆದಿದ್ದಾರೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷವನ್ನು ಮುನ್ನಡೆಸಬೇಕು. ಸಚಿನ್‌ ಪೈಲಟ್‌ ಡಿ.ಕೆ.ಶಿವಕುಮಾರ್ ಎ.ರೇವಂತ ರೆಡ್ಡಿ ಶಶಿ ತರೂರ್‌ ಅವರ ನಾಯಕತ್ವವನ್ನು ಪಕ್ಷ ಬಳಸಿಕೊಳ್ಳಬೇಕು.
– ಮೊಹಮ್ಮದ್‌ ಮೊಕಿಮ್‌, ಕಾಂಗ್ರೆಸ್‌ನ ಮಾಜಿ ಶಾಸಕ ಒಡಿಶಾ

ಪತ್ರದಲ್ಲಿನ ಪ್ರಮುಖ ಅಂಶಗಳು

  • ಪಕ್ಷವು ಸಂಘಟನಾತ್ಮಕವಾಗಿ ಭೌಗೋಳಿಕವಾಗಿ ಕುಸಿಯುತ್ತಿದೆ

  • ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ನಿರಾಸೆ ಮನೆಮಾಡಿದೆ. ಇದು ಹೃದಯ ಒಡೆದುಹೋಗುವಂತಹ ಸಂಗತಿ

  • ಬಿಹಾರ ದೆಹಲಿ ಹರಿಯಾಣ ಮಹಾರಾಷ್ಟ್ರ ಜಮ್ಮು–ಕಾಶ್ಮೀರ ಚುನಾವಣೆಗಳಲ್ಲಿ ಕಡಿಮೆ ಅಂತರದಲ್ಲಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆ ಎಂದು ತೋರಿದರೂ ಸಂಘಟನೆಯು ದುರ್ಬಲವಾಗಿರುವುದನ್ನು ಇದು ತೋರುತ್ತದೆ

  • ಸರಣಿ ತಪ್ಪು ನಿರ್ಧಾರಗಳು ಅರ್ಹರಲ್ಲದವರ ಕೈಗೆ ನಾಯಕತ್ವ ಕೊಟ್ಟಿದ್ದರಿಂದ ಪಕ್ಷ ಆಂತರಿಕವಾಗಿಯೇ ದುರ್ಬಲಗೊಂಡಿದೆ. ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಅವುಗಳು ಪುನರಾವರ್ತನೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಪರಿಣಾಮ ಇಡೀ ದೇಶಕ್ಕೇ ಗೋಚರಿಸುತ್ತಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.