ದೆಹಲಿ ಏಮ್ಸ್ ಎದುರು ಪ್ರತಿಭಟನಾನಿರತ ವೈದ್ಯರು
ಪಿಟಿಐ ಚಿತ್ರ
ನವದೆಹಲಿ: ಒಡಿಶಾದ ಪುರಿಯಲ್ಲಿ ಮೂವರು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 15 ವರ್ಷದ ಬಾಲಕಿ ಶನಿವಾರ ತಡ ರಾತ್ರಿ ಮೃತಪಟ್ಟಿದ್ದಾಳೆ.
ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಬಾಲಕಿ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹಾಗೂ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾಲಕಿಯ ತಂದೆ ಕೂಡ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದು ಈ ಘಟನೆಯಲ್ಲಿ ಮೂರನೇಯವರ ಕೈವಾಡ ಇಲ್ಲ, ನನ್ನ ಮಗಳು ಮಾನಸಿಕ ಖಿನ್ನತೆಯಿಂದ ಮೃತಪಟ್ಟಿದ್ದಾಳೆ. ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇತ್ತ ಒಡಿಶಾ ಪೊಲೀಸರು ಕೂಡ ಈ ಘಟನೆಯಲ್ಲಿ ಯಾರ ಕೈವಾಡವೂ ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದಾಗ್ಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಜುಲೈ 19ರ ಸಂಜೆ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಾಲಕಿಯನ್ನು ಬಲವಂತವಾಗಿ ಭಾರ್ಗವಿ ನದಿ ದಂಡೆಯ ಸಮೀಪಕ್ಕೆ ಎಳೆದೊಯ್ದು ಅಲ್ಲಿ ಆಕೆಯ ಮೇಲೆ ಪೆಟ್ರೋಲ್ ಉತ್ಪನ್ನದಿಂದ ಬೆಂಕಿ ಹಚ್ಚಿದ್ದ ಘಟನೆ ನೆಡೆದಿತ್ತು. ಸ್ಥಳೀಯರು ಬೆಂಕಿ ನಂದಿಸಿ ರಕ್ಷಣೆ ಮಾಡಿದ್ದರು.
ಬಾಲಕಿಗೆ ಶೇ 75ರಷ್ಟು ಸುಟ್ಟಗಾಯಗಳಾಗಿದ್ದು, ಮೊದಲು ಆಕೆಯನ್ನು ಭುವನೇಶ್ವರದ ಏಮ್ಸ್‌ಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ಕರೆತರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.