
ಭುವನೇಶ್ವರ: ಲಘು ವಿಮಾನವೊಂದು ಶನಿವಾರ ಒಡಿಶಾದ ರೂರ್ಕೆಲಾ ಬಳಿ ತುರ್ತು ಭೂಸ್ಪರ್ಶವಾಗಿದ್ದು, ಈ ಘಟನೆಯಲ್ಲಿ ಕನಿಷ್ಠ 6 ಮಂದಿಗೆ ಗಾಯಗಳಾಗಿವೆ ಎಂದು ಸಾರಿಗೆ ಸಚಿವ ಬಿ.ಬಿ ಜೆನಾ ತಿಳಿಸಿದ್ದಾರೆ.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಒಂಬತ್ತು ಆಸನಗಳ A-1 ಖಾಸಗಿ ಲಘು ವಿಮಾನ ತುರ್ತು ಭೂಸ್ಪರ್ಶವಾಗಿದೆ. ಪ್ರಯಾಣಿಕರಿಗೆ ಗಾಯಗಳಾಗಿವೆ. ದೇವರ ದಯೆಯಿಂದ ದೊಡ್ಡ ಅಪಘಾತವಾಗಿಲ್ಲ ಎಂದು ಜೆನಾ ಸುದ್ದಿಗಾರರಿಗೆ ಹೇಳಿದ್ದಾರೆ.
ವಿಮಾನವು ಭುವನೇಶ್ವರದಿಂದ ರೂರ್ಕೆಲಾಗೆ ತೆರಳುತ್ತಿತ್ತು. ರೂರ್ಕೆಲಾಗೆ ತಲುಪುವ 10 ಕಿ.ಮೀಗೂ ಮೊದಲೇ ಈ ಅಪಘಾತ ಸಂಭವಿಸಿದೆ. ಇಂಡಿಯಾ ಒನ್ ಏರ್ಲೈನ್ಸ್‌ನ C-208 ವಿಮಾನದಲ್ಲಿ 4 ಪ್ರಯಾಣಿಕರು ಮತ್ತು 2 ಸಿಬ್ಬಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಪ್ರಸನ್ನ ಪ್ರಧಾನ್ ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ತುರ್ತು ಭೂಸ್ಪರ್ಶವಾಗಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.