ADVERTISEMENT

ಪ್ರವಾದಿ ಮಹಮ್ಮದ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಅವಹೇಳನ: ತೆಲಂಗಾಣದಲ್ಲಿ ಪ್ರತಿಭಟನೆ

ಐಎಎನ್ಎಸ್
Published 12 ಜೂನ್ 2022, 6:27 IST
Last Updated 12 ಜೂನ್ 2022, 6:27 IST
   

ಹೈದರಾಬಾದ್‌: ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಳ್ಳಲಾಗಿದ್ದು, ಪೋಸ್ಟ್‌ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತೆಲಂಗಾಣದ ಆದಿಲ್‌ಬಾದ್‌ ಪಟ್ಟಣದಲ್ಲಿ ಶನಿವಾರ ರಾತ್ರಿ ಪ್ರತಿಭಟನೆ ನಡೆದಿದೆ.

ಪಟ್ಟಣದ ಪೊಲೀಸ್‌ ಠಾಣೆ ಎದುರು ಜಮಾಯಿಸಿದ ಭಾರಿ ಸಂಖ್ಯೆಯ ಜನರು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ. ಕೆಲವರು ಠಾಣೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಮತ್ತೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಇದರಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಸ್ಥಳಕ್ಕೆ ಧಾವಿಸಿದ ಸೂಪರಿಂಟೆಂಡ್‌ ಆಫ್‌ ಪೊಲೀಸ್‌ (ಎಸ್‌ಪಿ) ಉದಯ್‌ಕುಮಾರ್‌ ರೆಡ್ಡಿ ಅವರು, ವಾಟ್ಸ್‌ಆ್ಯಪ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ. ಪೋಸ್ಟ್‌ ಹಂಚಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.

ಶಾಂತಿ– ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿರುವ ಎಸ್‌ಪಿ, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಅವಹೇಳನಕಾರಿ ಪೋಸ್ಟ್‌ ಸಂಬಂಧ ಗ್ರೂಪ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದವರನ್ನು ನಿಂದಿಸಲಾಗಿದೆ ಎಂದೂ ಪ್ರತಿಭಟನಾಕಾರರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 295ಎ (ದುರುದ್ದೇಶದ ಕೃತ್ಯ, ಅವಹೇಳನದ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.