ADVERTISEMENT

ಪರ್ಯಾಯ ಮೂಲಗಳಿಂದ ತೈಲ ಆಮದು ಚಿಂತನೆ: ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:36 IST
Last Updated 8 ಮಾರ್ಚ್ 2022, 16:36 IST
ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಸಿ.ಎನ್.ಅಶ್ವತ್ಥನಾರಾಯಣ ಚರ್ಚಿಸಿದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಸಿ.ಎನ್.ಅಶ್ವತ್ಥನಾರಾಯಣ ಚರ್ಚಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಅಗತ್ಯದ ಶೇ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿರುವುದರಿಂದ ಪರ್ಯಾಯ ಮೂಲಗಳಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ’ ಎಂದುಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ರಾಜ್ಯ ಬಿಜೆಪಿ ಘಟಕವುನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆತ್ಮನಿರ್ಭರ ಅರ್ಥವ್ಯವಸ್ಥೆ’ ಸಂವಾದದಲ್ಲಿ ಅವರು ಮಾತನಾಡಿದರು.

‘ರಷ್ಯಾ–ಉಕ್ರೇನ್‌ ಯುದ್ಧವು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಇದನ್ನು ಸವಾಲಾಗಿ ಸ್ವೀಕರಿಸಿ, ಪರಿಣಾಮ ತಗ್ಗಿಸಲು ಸಜ್ಜಾಗಿದ್ದೇವೆ. ತೈಲ ಬೆಲೆ ಏರುಪೇರು ತಡೆಯಲು ಬಜೆಟ್‌ನಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಆದರೆ ಈಗ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಭಾರಿ ಏರಿಕೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಇಂಧನ ದರ ನಿರ್ಧರಿಸಲಿವೆ’ ಎಂದು ಹೇಳಿದರು.

ADVERTISEMENT

‘ರಷ್ಯಾ-ಉಕ್ರೇನ್ ಯುದ್ಧ ಭಾರತಕ್ಕೆ ಸವಾಲೊಡ್ಡಿದೆ. ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಗೋಧಿ ಪೂರೈಕೆ ವ್ಯತ್ಯಯವಾಗಿದೆ. ಭಾರತದ ರೈತರು ಹೇರಳ ಪ್ರಮಾಣದಲ್ಲಿ ಗೋಧಿಯನ್ನು ಉತ್ಪಾದಿಸುತ್ತಿದ್ದಾರೆ. ಆತ್ಮನಿರ್ಭರ ಭಾರತವು ಇಡೀ ವಿಶ್ವಕ್ಕೆ ಉತ್ಪನ್ನಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.ಈ ಸಂದರ್ಭದಲ್ಲಿ ನಾವು ಜಾಗತಿಕ ದೃಷ್ಟಿಕೋನದಿಂದ ಸವಾಲು ಸ್ವೀಕರಿಸಬೇಕು’ ಎಂದರು.

‘ಆತ್ಮನಿರ್ಭರ ಭಾರತವುಕೊರೊನಾ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದೆ. ಆರು ತಿಂಗಳಲ್ಲಿ 5 ಲಕ್ಷ ಪಿಪಿಇ ಕಿಟ್ ತಯಾರಿಸಲಾಯಿತು. ಬಳಿಕ ಪಿಪಿಇ ಕಿಟ್ ಆಮದು ಸ್ಥಗಿತ ಮಾಡಲಾಯಿತು. ವಿಶ್ವಕ್ಕೆ ಅಗತ್ಯವಿರುವ ಶೇ 66ರಷ್ಟು ಲಸಿಕೆಯನ್ನು ಭಾರತ ಪೂರೈಕೆ ಮಾಡಿದೆ. ಕೋವಿಡ್‌ಲಸಿಕೆಯ ಡಿಜಿಟಲ್‌ ದಾಖಲೆ ವ್ಯವಸ್ಥೆ ಬೇರೆ ದೇಶಗಳಲ್ಲಿ ಇಲ್ಲ’ ಎಂದರು.

‘ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 2014ರ ನಂತರ ಮಹಿಳೆಯರ ಭಾಗವಹಿಸುವಿಕೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಲಿಂಗಾನುಪಾತವು ಸಾವಿರ ಪುರುಷರಿಗೆ 1,026 ಮಹಿಳೆಯರು ಇರುವಷ್ಟು ಏರಿದೆ. ರಫೇಲ್‌ ಯುದ್ಧ ವಿಮಾನವನ್ನು ಮಹಿಳೆಯರೇ ಚಲಾಯಿಸುತ್ತಿದ್ದಾರೆ. ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ನೀಡಲಾಗುತ್ತಿದೆ. ಬಿಜೆಪಿ ಒಂದು ವಿಶಾಲವಾದ ಮನೆ. ಇಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ರಕ್ಷಣೆಯ ಹಾಗೂ ಆದ್ಯತೆಯ ವಾತಾವರಣವಿದೆ’ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು. ರಾಜ್ಯಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.