ಮುಂಬೈ: ‘ರಷ್ಯಾ ಮಾತ್ರವಲ್ಲ, ಕಡಿಮೆ ದರಕ್ಕೆ ಎಲ್ಲಿ ತೈಲ ದೊರೆತರೂ ಅಲ್ಲಿಂದ ಖರೀದಿ ಮಾಡುವುದನ್ನು ಭಾರತ ಮುಂದುವರೆಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುತ್ತಿರುವುದು ಪರೋಕ್ಷವಾಗಿ ಉಕ್ರೇನ್ ಹಿಂಸಾಚಾರಕ್ಕೆ ಧನ ಸಹಾಯ ಮಾಡಿದಂತೆ ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರಾಯ್ಟ್ ಹೇಳಿಕೆ ಕೊಟ್ಟ ಮಾರನೇ ದಿನ ಅಮಿತ್ ಶಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈನಲ್ಲಿ ಪತ್ರಿಕಾ ಸಮೂಹವೊಂದು ನಡೆಸಿದ ಸಂವಾದದಲ್ಲಿ ರಷ್ಯಾ ತೈಲ ಖರೀದಿಗೆ ಅಮೆರಿಕ ಆಕ್ಷೇಪ ಮತ್ತು ಭಾರತದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಹೆಚ್ಚುವರಿ ಪ್ರತಿಸುಂಕ, ಎಚ್–1 ಬಿ ವಿಸಾ ಶುಲ್ಕ ಹೆಚ್ಚಳ ಕುರಿತು ಅವರು ಉತ್ತರಿಸಿದರು
‘ಭಾರತ–ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಮುಂದುವರೆದಿದೆ. ಸಚಿವ ಪಿಯೂಶ್ ಗೋಯಲ್ ಅಮೆರಿಕದಲ್ಲೇ ಇದ್ದಾರೆ. ಎರಡು–ಮೂರು ವಾರಗಳಲ್ಲಿ ನಿರ್ಧಾರ ಆಗಬಹುದು. ಎಲ್ಲವೂ ಶೀಘ್ರ ಬಗೆಹರಿಯಲಿದೆ’ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ‘ರಾಹುಲ್ ಗಾಂಧಿ ಅವರ ಪಕ್ಷದ ಹಲವರು ಜಿಎಸ್‌ಟಿ ನಮ್ಮ ಆಲೋಚನೆ ಎನ್ನುತ್ತಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಏಕೆ ಅನುಷ್ಠಾನಕ್ಕೆ ತರಲಿಲ್ಲ. ಅವರು ರಾಜ್ಯಗಳು ವಿರೋಧ ಮಾಡುತ್ತಿವೆ ಎಂದಿದ್ದರು. ರಾಜ್ಯಗಳಿಗೆ ಬೆಳವಣಿಗೆಯ ಖಾತ್ರಿ ನೀಡುವಲ್ಲಿ ಯುಪಿಎ ಸರ್ಕಾರ ವಿಫಲವಾಗಿತ್ತು. ಮೋದಿ ಸರ್ಕಾರ ಶೇಕಡ 14ರಷ್ಟು ಪ್ರಗತಿಯನ್ನು ರಾಜ್ಯಗಳಿಗೆ ಖಾತ್ರಿಪಡಿಸಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.