ADVERTISEMENT

ಲೋಕಸಭಾ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 10:09 IST
Last Updated 19 ಜೂನ್ 2019, 10:09 IST
   

ನವದೆಹಲಿ: ಲೋಕಸಭೆಯ ನೂತನ ಸ್ಪೀಕರ್ ಆಗಿ ರಾಜಸ್ಥಾನ ಮೂಲದ ಹಿರಿಯ ರಾಜಕಾರಣಿ ಬಿಜೆಪಿಯ ಸಂಸದ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.

56 ವರ್ಷ ವಯಸ್ಸಿನಬಿರ್ಲಾ ಅವರು ರಾಜಸ್ಥಾನದ ವಿದ್ಯಾರ್ಥಿ ಘಟಕದ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ ಸುಮಾರು 40 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಅನುಭವ ಹೊಂದಿದ್ದಾರೆ. ರಾಜಸ್ಥಾನ ಕೋಟಾ-ಬಂಡಿ ಲೋಕಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಸ್ವೀಕರ್ ಆಯ್ಕೆ ಪ್ರಕ್ರಿಯೆಗಳು ನಡೆದಾಗ ಓಂ ಬಿರ್ಲಾ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿ 13 ವಿರೋಧ ಪಕ್ಷಗಳು ಪ್ರಸ್ತಾವ ಸಲ್ಲಿಸಿದವು. ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಧ್ವನಿಮತದ ಮೂಲಕ ಪ್ರಸ್ತಾವ ಸಲ್ಲಿಸಿದಾಗ ಸರ್ವಾನುಮತದಿಂದ ಅಂಗೀಕರಿಸಿ ಓಂ ಬಿರ್ಲಾ ಅವರ ಆಯ್ಕೆಯನ್ನು ಘೋಷಿಸಲಾಯಿತು.

ಆಯ್ಕೆ ಘೋಷಣೆಯಾದ ನಂತರ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನದಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಕರೆದೊಯ್ದರು. ನಂತರ ಸಭಾಧ್ಯಕ್ಷರಿಗೆ ವಂದಿಸುವ ಮೂಲಕ ಗೌರವ ಸೂಚಿಸಿದರು.ನಂತರ ಮಾತನಾಡಿದ ಮೋದಿ,ಓಂ ಬಿರ್ಲಾ ಅವರ ರಾಜಕೀಯದ ಕೇಂದ್ರ ಬಿಂದು ಅಂದರೆ ಅದು ಸಮಾಜಸೇವೆ. 2001ರಲ್ಲಿ ಗುಜರಾತಿನ ಕಚ್‌‌ನಲ್ಲಿ ಸಂಭವಿಸಿದ ಭೂಕಂಪದ ಸಂದರ್ಭ ಸಾವಿರಾರು ಜನರ ಸಾವುನೋವು ಸಂಭವಿಸಿದಾಗ ಓಂಬಿರ್ಲಾ ಅವರು 100 ಮಂದಿ ಸ್ವಯಂ ಸೇವಕರ ತಂಡಗಳನ್ನು ಕಟ್ಟಿಕೊಂಡು ತೊಂದರೆಗೆ ಸಿಲುಕಿದ ಜನರಿಗೆ ಸಹಾಯ ಮಾಡಿದ ರೀತಿ ಅತ್ಯಮೂಲ್ಯವಾದದ್ದು. ಅಲ್ಲದೆ, ರಾಜಸ್ಥಾನದ ಕೋಟಾದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದೆಂದು ಇಂದಿಗೂ ಶ್ರಮಿಸುತ್ತಿದ್ದಾರೆ ಎಂದು ನೆನಪಿಸಿಕೊಂಡರು.ನಿಯಮ ಉಲ್ಲಂಘಿಸಿದರೆ ನಮ್ಮ ಪಕ್ಷದ ಸದಸ್ಯರೂ ಸೇರಿದಂತೆ ಯಾರೇ ಆಗಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು.

ADVERTISEMENT

ಕಾಂಗ್ರೆಸ್ ಪಕ್ಷದ ನಾಯಕ ಆಧಿರ್ ಚೌದರಿ ಮಾತನಾಡಿ,ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ಬಂದಾಗ ಆಡಳಿತ ಪಕ್ಷದ ಗಮನ ಸೆಳೆಯಲು ವಿರೋಧಪಕ್ಷಗಳಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು. ಅಲ್ಲದೆ, ನಿಷ್ಪಕ್ಷಪಾತಿಯಾಗಿರಿ. ಕೇವಲ ಬೆರಳೆಣಿಕೆಯಷ್ಟು ಶಾಸನಗಳು ಮಾತ್ರ ಲೋಕಸಭೆಯ ಸ್ಥಾಯಿ ಸಮಿತಿಗಳಿಂದ ಅನುಮೋದಿಸಲಾಗಿದೆ. ಪ್ರಮುಖವಾದ ಕೆಲವು ಕಾಯ್ದೆಗಳ ಕಡೆ ಗಮನಕೊಡುತ್ತೀರೆಂದು ನಂಬಿದ್ದೇವೆ ಎಂದರು. ಕಾಂಗ್ರೆಸ್ಸಿನ ಆಧಿರ್ ಚೌದರಿ ಮಾತಿಗೆ ಬಿಜೆಡಿಯ ಪಿನಾಕಿ ಮಿಶ್ರಾ ಧ್ವನಿಗೂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸ್ನೇಹಿತರಾಗಿರುವ ಓಂ ಬಿರ್ಲಾ 2014ರಿಂದ 2008ರವರೆಗೆ ರಾಜಸ್ಥಾನದ ಪರವಾಗಿ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯಾಗಿಯೂ ನವದೆಹಲಿಯಲ್ಲಿ ಕೆಲಸ ಮಾಡಿದ್ದಾರೆ. 2014ರಲ್ಲಿ ಲೋಕಸಭೆಗೆ ಪ್ರಥಮಬಾರಿಗೆ ಆಯ್ಕೆಯಾಗಿದ್ದ ಬಿರ್ಲಾ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.