
ಪಟ್ನಾ: ಚರ್ಚೆ ಮತ್ತು ಸಂವಾದ ಪ್ರಜಾಪ್ರಭುತ್ವದ ಭಾಗ. ಯಾವುದೇ ಹಂತದಲ್ಲೇ ಆಗಲಿ ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರು ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
ಬಿಹಾರ ವಿಧಾನಸಭೆಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಕಾಗದರಹಿತ ಶಾಸಕಾಂಗ ಪ್ರಕ್ರಿಯೆಗಳ ರಾಷ್ಟ್ರೀಯ ‘ಇ–ವಿಧಾನ್’ ಆ್ಯಪ್‌ಗೆ (ನೆವಾ) ಚಾಲನೆ ನೀಡಿ ಅವರು ಮಾತನಾಡಿದರು.
‘ಚುನಾಯಿತ ಪ್ರತಿನಿಧಿಗಳು ಸದನದ ಶಿಷ್ಟಾಚಾರ ಪಾಲಿಸಬೇಕು. ಸಂಸದರು ಮತ್ತು ಶಾಸಕರಿಗೆ ತಮ್ಮ ನಿಲುವು ಮತ್ತು ಅಭಿಪ್ರಾಯ ವ್ಯಕ್ತಪಡಿಸುವ, ಹಂಚಿಕೊಳ್ಳುವ ಅಧಿಕಾರವಿದೆ. ಆದರೆ, ಆ ಸಂದರ್ಭದಲ್ಲಿ ಸದನದ ಘನತೆಯನ್ನೂ ಕಾಯ್ದುಕೊಳ್ಳಬೇಕು’ ಎಂದರು.
‘ಜವಾಬ್ದಾರಿಯುತ ಜನಪ್ರತಿನಿಧಿ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ಇದ್ದಂತೆ. ಶಾಸನಸಭೆಗಳ ಕಾರ್ಯವಿಧಾನದ ನಿಯಮಗಳನ್ನು ಅವರು ಅರಿತುಕೊಳ್ಳಬೇಕಿದೆ’ ಎಂದು ಹೇಳಿದರು.
‘ಶಾಸನಸಭೆಗಳ ಸಭ್ಯತೆ ಕುಸಿಯುತ್ತಿರುವುದನ್ನು ಪ್ರಸ್ತುತ ದಿನಮಾನದಲ್ಲಿ ಕಾಣುತ್ತಿದ್ದೇವೆ. ಚರ್ಚೆ ಮತ್ತು ಸಂವಾದದ ಮೂಲಕ ಅಭಿಪ್ರಾಯ ಮಂಡಿಸುವ ಬದಲು ಘೋಷಣೆ ಕೂಗುವುದು, ಅಡ್ಡಿಪಡಿಸುವುದು, ಸಭಾಧ್ಯಕ್ಷರ ಪೀಠದ ಮುಂದಿನ ಭಾಗದತ್ತ ನುಗ್ಗುವುದು ಸರಿಯಲ್ಲ. ಇಂತಹ ನಡವಳಿಕೆ ನಿಲ್ಲಿಸಬೇಕು’ ಎಂದು ಓಂ ಬಿರ್ಲಾ ಮನವಿ ಮಾಡಿದರು.
ನಿತೀಶ್, ತೇಜಸ್ವಿ ಗೈರು:
ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಗೈರಾಗಿದ್ದರು. ಪೂರ್ವನಿಗದಿತ ಕಾರ್ಯಕ್ರಮವಿದ್ದ ಕಾರಣ ಮುಖ್ಯಮಂತ್ರಿ ಸಭಾಧ್ಯಕ್ಷರ ಪೂರ್ವಾನುಮತಿ ಪಡೆದಿದ್ದರು ಎಂದು ಬಿಹಾರ ಸಚಿವ ವಿಜಯ್‌ಕುಮಾರ್ ಚೌಧರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.