ಒಮರ್ ಅಬ್ದುಲ್ಲಾ
– ಪಿಟಿಐ ಚಿತ್ರ
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಚಬಾಲ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ಲಾ, ರಾಜ್ಯದ ಸ್ಥಾನಮಾನಕ್ಕಾಗಿ ಯಾವುದೇ ರಾಜಕೀಯ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ರಾಜ್ಯದ ಸ್ಥಾನಮಾನಕ್ಕಾಗಿ ಬಿಜೆಪಿ ಜೊತೆ ಮೈತ್ರಿಗೆ ಜನರು ಸಿದ್ಧರಿದ್ದರೆ ನನಗೆ ತಿಳಿಸಲಿ. ಆ ವ್ಯಾಪಾರ ಮಾಡಲು ನಾನು ಸಿದ್ಧನಿಲ್ಲ. ಬಿಜೆಪಿಯನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕಾದರೆ, ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ಇಲ್ಲಿರುವ ಯಾವುದೇ ಶಾಸಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿ’ಎಂದು ಅವರು ಹೇಳಿದ್ದಾರೆ.
‘ನಾವು ಬಿಜೆಪಿಯನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕೇ? ಬಿಜೆಪಿಯನ್ನು ಸರ್ಕಾರದಲ್ಲಿ ಸೇರಿಸಿಕೊಂಡಿದ್ದರೆ ನಮಗೆ ಉಡುಗೊರೆ ಸಿಗುತ್ತಿತ್ತೇ? ಬೇಗ ರಾಜ್ಯದ ಸ್ಥಾನಮಾನ ನೀಡುತ್ತಿದ್ದರೇ?’ಎಂದು ಪ್ರಶ್ನಿಸಿದ ಅವರು, ರಾಜ್ಯ ಸ್ಥಾನಮಾನ ಪಡೆಯುವುದಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.