ADVERTISEMENT

ಓಮೈಕ್ರಾನ್‌ ಮುನ್ನೆಚ್ಚರಿಕೆ: ಹೋಂ ಐಸೊಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2022, 11:10 IST
Last Updated 5 ಜನವರಿ 2022, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌ ಮೂರನೇ ಅಲೆಯ ಎಚ್ಚರಿಕೆಯ ನಡುವೆಯೇ 24 ಗಂಟೆಗಳ ಅಂತರದಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವ 58,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 534 ಮಂದಿ ಸಾವಿಗೀಡಾಗಿದ್ದಾರೆ. ತೀವ್ರವಲ್ಲದ ಮತ್ತು ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಳ್ಳದ ಕೋವಿಡ್‌ ರೋಗಿಗಳು ಮನೆಯಲ್ಲಿ ಪ್ರತ್ಯೇಕ ವಾಸ (ಹೋಂ ಐಸೊಲೇಷನ್‌) ಮಾಡುವುದಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

'ಕೋವಿಡ್‌ ಪಾಸಿಟಿವ್‌ ಬಂದು ಕನಿಷ್ಠ ಏಳು ದಿನಗಳವರೆಗೂ ಪ್ರತ್ಯೇಕ ವಾಸದಲ್ಲಿರಬೇಕು ಹಾಗೂ ಸತತ 3 ದಿನ ಜ್ವರ ಕಾಣಿಸಿಕೊಳ್ಳದಿರುವುದನ್ನು ದೃಢಪಡಿಸಿಕೊಳ್ಳಬೇಕು. ಹೋಂ ಐಸೊಲೇಷನ್‌ ಅವಧಿ ಪೂರೈಸಿದ ನಂತರ ಮತ್ತೆ ಕೋವಿಡ್‌ ಪರೀಕ್ಷೆಗೆ ಒಳಗಾಗುವ ಅವಶ್ಯಕತೆ ಇಲ್ಲ' ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜಗತ್ತಿನಾದ್ಯಂತ ಓಮೈಕ್ರಾನ್‌ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ. ಆದರೆ, ಈವರೆಗೂ ಹೆಚ್ಚಿನ ಪ್ರಕರಣಗಳಲ್ಲಿ ಆಸ್ಪತ್ರೆಗೆ ಸೇರುವ ಅಗತ್ಯ ಎದುರಾಗಿಲ್ಲ.

ADVERTISEMENT

ಪ್ರಸ್ತುತ ಬಹುತೇಕ ಕೋವಿಡ್‌–19 ದೃಢ ಪ್ರಕರಣಗಳಲ್ಲಿ ಸೋಂಕಿನ ಸಾಧಾರಾಣ ಲಕ್ಷಣಗಳು ಅಥವಾ ಯಾವುದೇ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಮನೆಯಲ್ಲಿಯೇ ಸೂಕ್ತ ವೈದ್ಯಕೀಯ ಸಲಹೆಗಳು ಹಾಗೂ ನಿಗಾವಹಿಸುವ ಮೂಲಕ ಸೋಂಕಿನಿಂದ ಚೇತರಿಸಿಕೊಳ್ಳುವುದು ಸಾಧ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯ ಪಟ್ಟಿದೆ.

ಹೋಂ ಐಸೊಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ; ಇಲ್ಲಿದೆ ವಿವರ–

* 'ಸೋಂಕಿನ ಸಾಧಾರಾಣ ಲಕ್ಷಣಗಳು ಅಥವಾ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದ ಪ್ರಕರಣ' ಎಂಬುದನ್ನು ವೈದ್ಯಾಧಿಕಾರಿಯು ಗೊತ್ತು ಪಡಿಸಬೇಕು. ವೈದ್ಯಕೀಯ ಪರೀಕ್ಷೆ, ಅನುಸರಿಸಬೇಕಾದ ಕ್ರಮಗಳು ಹಾಗೂ ಆಸ್ಪತ್ರೆಯಲ್ಲಿ ಬೆಡ್‌ ಕಾಯ್ದಿರಿಸುವ ಬಗ್ಗೆ ಮಾಹಿತಿ ನೀಡಲು ಕುಟುಂಬಕ್ಕೆ ನಿಯಂತ್ರಣ ಕೊಠಡಿಯ ಸಂಪರ್ಕ ಸಂಖ್ಯೆ ಒದಗಿಸಬೇಕು.

* ರೋಗಿಯು ಪ್ರತ್ಯೇಕ ವಾಸದಲ್ಲಿರಲು ಹಾಗೂ ಅವರ ಸಂಪರ್ಕಕ್ಕೆ ಬಂದಿರುವ ಕುಟುಂಬದವರು ಕ್ವಾರಂಟೈನ್‌ ಆಗಲು ಮನೆಯಲ್ಲಿ ಅಗತ್ಯ ಸೌಲಭ್ಯಗಳು ಇರಬೇಕು.

* ರೋಗಿಯ ಕಡೆಗೆ ನಿಗಾವಹಿಸಲು 24*7 ಸಹಾಯಕರು ಇರಬೇಕು, ಅವರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಂಡಿರಬೇಕು.

* 60 ವರ್ಷಕ್ಕೂ ಹೆಚ್ಚು ವಯಸ್ಸಿನವರು ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು, ಶ್ವಾಸಕೋಶ/ ಮೂತ್ರಪಿಂಡ/ ಯಕೃತ್ತು ಸಮಸ್ಯೆ ಇರುವವರು ಹಾಗೂ ಮಿದುಳಿನ ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆ ಇರುವ ರೋಗಿಗಳನ್ನು ಸೂಕ್ತ ಪರಿಶೀಲನೆಯ ನಂತರಷ್ಟೇ ವೈದ್ಯಕೀಯ ಅಧಿಕಾರಿ ಹೋಂ ಐಸೊಲೇಷನ್‌ಗೆ ಅವಕಾಶ ನೀಡಬಹುದು.

* ರೋಗಿಯು ಕುಟುಂಬದ ಇತರೆ ಸದಸ್ಯರಿಂದ ಪ್ರತ್ಯೇಕವಾಗಿ ವಾಸಿಸಬೇಕು. ಕೋವಿಡ್‌ ರೋಗಿಯು ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿರುವಾಗ ಕುಟುಂಬದ ಇತರೆ ಸದಸ್ಯರು ಹೋಂ ಕ್ವಾರಂಟೈನ್‌ ನಿಯಮಾವಳಿಯನ್ನು ಅನುಸರಿಬೇಕು.

* ಕೋವಿಡ್ ರೋಗಿಯು ಮೂರು ಪದರಗಳ ಕ್ಲಿನಿಕಲ್‌ ಮಾಸ್ಕ್‌ ಧರಿಸಬೇಕು, ಎನ್‌–95 ಮಾಸ್ಕ್‌ ಧರಿಸುವುದು ಉತ್ತಮ. ದೇಹದ ಉಷ್ಣಾಂಶ, ರಕ್ತದಲ್ಲಿನ ಆಮ್ಲಜನಕರ ಪ್ರಮಾಣವನ್ನು (ಆಕ್ಸಿಮೀಟರ್‌ ಬಳಸಿ) ಸ್ವತಃ ಪರೀಕ್ಷಿಸಿಕೊಳ್ಳಬೇಕು.

* ಕೊರೊನಾ ವೈರಸ್‌ ಸೋಂಕಿತರು ಅಧಿಕ ಪ್ರಮಾಣದಲ್ಲಿ ನೀರು ಕುಡಿಯಬೇಕು. ಉಸಿರಾಟದ ಏರು–ಪೇರಿಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಅನುಸರಿಬೇಕು. ಕೈ ತೊಳೆಯುವುದು ಸೇರಿದಂತೆ ಸ್ವಚ್ಛತೆಯ ಎಲ್ಲ ನಿಯಮಗಳನ್ನು ಅನುಸರಿಬೇಕು.

* ಜಿಲ್ಲಾಡಳಿತವು ನಿತ್ಯ ಹೋಂ ಐಸೊಲೇಷನ್‌ ಪ್ರಕರಣಗಳ ಬಗ್ಗೆ ನಿಗಾವಹಿಸಬೇಕು.

* ಕೋವಿಡ್‌ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಅವರು ಕೋವಿಡ್‌ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ. ಹೋಂ ಕ್ವಾರಂಟೈನ್‌ ವೇಳೆ ಆರೋಗ್ಯದ ಮೇಲೆ ನಿಗಾವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.