ADVERTISEMENT

ನಿಯೋಜಿತ ಆಸ್ಪತ್ರೆಗಳಲ್ಲಷ್ಟೇ ಓಮೈಕ್ರಾನ್‌ಗೆ ಚಿಕಿತ್ಸೆ: ಕೇಂದ್ರದಿಂದ ಮಾರ್ಗಸೂಚಿ

ಪಿಟಿಐ
Published 8 ಡಿಸೆಂಬರ್ 2021, 14:35 IST
Last Updated 8 ಡಿಸೆಂಬರ್ 2021, 14:35 IST
ಓಮೈಕ್ರಾನ್‌
ಓಮೈಕ್ರಾನ್‌    

ನವದೆಹಲಿ: ದೇಶದ ಕೆಲವೆಡೆ ಓಮೈಕ್ರಾನ್‌ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ನಿಯೋಜಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಮತ್ತು ಪ್ರತ್ಯೇಕ ಐಸೊಲೇಷನ್‌ ಪ್ರದೇಶಗಳಲ್ಲಿ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂಬ ಸೂಚನೆ ಸಹಿತ 10 ಅಂಶಗಳ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ.

ಇತರ ರೋಗಿಗಳಿಗೆ ಓಮೈಕ್ರಾನ್‌ ಹರಡಬಾರದು ಎಂಬ ಕಾರಣಕ್ಕೆ ಈ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಬುಧವಾರ ರವಾನಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಪ್ರಯಾಣಿಕರು ಓಮೈಕ್ರಾನ್‌ ಸೋಂಕಿಗೆ ಒಳಗಾದರೆ, ಅವರ ಸಂಪರ್ಕಿತರು ಮತ್ತು ಹಾಟ್‌ಸ್ಪಾಟ್‌ಗಳಿಂದ ಮಾದರಿಗಳು ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಗಳಿಗೆ ರವಾನೆಯಾಗುತ್ತಿರುವುದನ್ನು ನಿರಂತರ ಪರಿಶೀಲಿಸಬೇಕು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ತಕ್ಷಣ ಪತ್ತೆಹಚ್ಚಬೇಕು ಹಾಗೂ ಅವರೆಲ್ಲರಿಗೂ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಲಾಗಿದೆ.

ADVERTISEMENT

ವಿಳಂಬ ಇಲ್ಲದೆ ಕ್ವಾರಂಟೈನ್: ಓಮೈಕ್ರಾನ್ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು ವಿಳಂಬ ಇಲ್ಲದೆ ಕ್ವಾರಂಟೈನ್‌ಗೆ ಒಳಪಡಿಸಬೇಕು, ಸಮುದಾಯದ ಮೇಲೆ ನಿಗಾ ವಹಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ವಾರಕ್ಕೆ ಶೇ 5ಕ್ಕಿಂತ ಅಧಿಕ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಸೂಕ್ತ ಪರೀಕ್ಷಾ ಸೌಲಭ್ಯವನ್ನು ಕಲ್ಪಿಸಬೇಕು, ಈ ವ್ಯವಸ್ಥೆ ಇಲ್ಲದಿದ್ದರೆ ಸೋಂಕು ಹರಡುವ ಮಟ್ಟವನ್ನು ಅಂದಾಜಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.

ದೇಶದಲ್ಲಿ ಚಳಗಾಲ ಕಾಲಿಟ್ಟಿದ್ದು, ವಿಷಮ ಶೀತ ಮಾದರಿಯ ಜ್ವರ, ತೀವ್ರ ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳೂ ಕಾಡುತ್ತವೆ. ಇಂತಹ ಕಾಯಿಲೆಗಳ ಬಗ್ಗೆಯೂ ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಲಾಗಿದೆ.

ಓಮೈಕ್ರಾನ್‌ ನಿಯಂತ್ರಣ ಸಲುವಾಗಿ ಕೇಂದ್ರವು ನವೆಂಬರ್‌ 25, 27 ಮತ್ತು 29ರಂದು ಸಹ ಇಂತಹದೇ ಮಾರ್ಗಸೂಚಿ ರವಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.