ADVERTISEMENT

ಓಮೈಕ್ರಾನ್ ಪ್ರಕರಣ ಹೆಚ್ಚಳ: ಪರೀಕ್ಷೆ ಹೆಚ್ಚಿಸಲು 9 ರಾಜ್ಯಗಳಿಗೆ ಕೇಂದ್ರ ಪತ್ರ

ಪಿಟಿಐ
Published 6 ಜನವರಿ 2022, 19:07 IST
Last Updated 6 ಜನವರಿ 2022, 19:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಪ್ರಬಲವಾಗಿ ಹರಡುವ ಗುಣ ಹೊಂದಿದ್ದು, ರೋಗಲಕ್ಷಣಗಳಿಲ್ಲದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ರೋಗ ಲಕ್ಷಣಗಳಿಲ್ಲದ ಜನರಿಂದ ಇತರರಿಗೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೋವಿಡ್ ಪತ್ತೆ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸುವಂತೆ 9 ರಾಜ್ಯಗಳಿಗೆ ಕೇಂದ್ರ ಸರ್ಕಾರ ಗುರುವಾರ ಸೂಚಿಸಿದೆ.

ತಮಿಳುನಾಡು, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಮಿಜೋರಾಂ, ಮೇಘಾಲಯ, ಜಮ್ಮು–ಕಾಶ್ಮೀರ ಮತ್ತು ಬಿಹಾರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು ಪತ್ರ ಬರೆದಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಕೋವಿಡ್ ದೃಢಪಡುವ ಪ್ರಮಾಣ ಅಧಿಕವಾಗುತ್ತಿದ್ದರೂ ರಾಜ್ಯಗಳು ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಓಮೈಕ್ರಾನ್ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದಿರುವುದರಿಂದ ಹಾಗೂ ಲಸಿಕೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿರುವ ದೇಶಗಳಲ್ಲೂ ಸೋಂಕು ವ್ಯಾಪಕವಾಗಿ ಉಲ್ಬಣಿಸುತ್ತಿರುವುದರಿಂದ, ನಿರಂತರವಾದ ನಿಗಾ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮತ್ತೆ ಕೋವಿಡ್ ಅಬ್ಬರ

lದೆಹಲಿಯಲ್ಲಿ ಒಂದೇ ದಿನದಲ್ಲಿ15,097 ಹೊಸ ಪ್ರಕರಣ ದಾಖಲಾಗಿದ್ದು, ಕೋವಿಡ್ ದೃಢಪಡುವ ಪ್ರಮಾಣ ಶೇ 15.34ಕ್ಕೆ ಏರಿಕೆ. ಮುಂಬೈಯಲ್ಲಿ 20,181 ಪ್ರಕರಣಗಳು ಪತ್ತೆಯಾಗಿವೆ.

lಕೋವಿಡ್ ಏರಿಕೆ: ‘ವೈಬ್ರಂಟ್ ಗುಜರಾತ್’ ಸಮಾರಂಭ ಮುಂದೂಡಿಕೆ

lಹರಿಯಾಣ: 6 ಜಿಲ್ಲೆಗಳಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಮುಚ್ಚಲು ಆದೇಶ

lರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಕೇಂದ್ರ ಸಚಿವರಾದ ನಿತ್ಯಾನಂದ ರಾಯ್ ಹಾಗೂ ಭಾರತಿ ಪವಾರ್ ಅವರಿಗೆ ಕೋವಿಡ್ ದೃಢ

lಇಟಲಿಯಿಂದ ಅಮೃತಸರಕ್ಕೆ ಬಂದ ವಿಮಾನದಲ್ಲಿದ್ದ 179 ಪ್ರಯಾಣಿಕರ ಪೈಕಿ 125 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಮುನ್ನೆಚ್ಚರಿಕೆ ಡೋಸ್‌ ಮಾರ್ಗಸೂಚಿ

ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆಯ ಮೊದಲ ಎರಡು ಡೋಸ್‌ ರೀತಿಯಲ್ಲಿಯೇ ‘ಮುನ್ನೆಚ್ಚರಿಕೆ ಡೋಸ್‌’ ಅನ್ನು ಕೂಡ ನೀಡಲಾಗುವುದು. ಹಿರಿಯ ನಾಗರಿಕರು ಮತ್ತು ಗಂಭೀರ ಅನಾರೋಗ್ಯ ಹೊಂದಿರುವವರಿಗೂ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುವುದು. ಇದು ಇದೇ 10ರಂದು ಆರಂಭವಾಗಲಿದೆ.

ಕೋವಿಡ್‌ ಲಸಿಕೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು ತಮ್ಮ ಸಿಬ್ಬಂದಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಬಹುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.