ADVERTISEMENT

ಹೂವಿನ ಆಮದಿಗಾಗಿ ಉತ್ತರ ಭಾರತದಲ್ಲೂ ವಿಮಾನ ನಿಲ್ದಾಣ ನಿಗದಿಪಡಿಸಿ: ಕೋರ್ಟ್‌

ಪಿಟಿಐ
Published 18 ಡಿಸೆಂಬರ್ 2020, 8:29 IST
Last Updated 18 ಡಿಸೆಂಬರ್ 2020, 8:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿದೇಶದಿಂದ ಹೂವುಗಳ ಆಮದಿಗಾಗಿ ಚೆನ್ನೈ ವಿಮಾನ ನಿಲ್ದಾಣವನ್ನು ಮೀಸಲಿಡುವುದರ ಜತೆಗೆ ಕೇಂದ್ರ ಸರ್ಕಾರವು ಉತ್ತರ ಭಾರತದಲ್ಲೂ ಹೂವಿನ ಆಮದಿಗಾಗಿ ಒಂದು ವಿಮಾನ ನಿಲ್ದಾಣನ್ನು ನಿಗದಿಪಡಿಸಬಹುದು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೇಳಿದೆ.

‘ಇದು ಕೇವಲ ದಾಸ್ತಾನು ಸೌಕರ್ಯದ ವಿಷಯವಾಗಿದೆ. ಕೊರೊನಾದ ಈ ಪರಿಸ್ಥಿತಿಯಲ್ಲಿ ಯಾವುದೇ ವ್ಯವಹಾರಗಳು ತೊಂದರೆಗೆ ಒಳಗಾಗಬಾರದು. ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ಮಾರ್ಗ ಸಿಕ್ಕೇ ಸಿಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್‌ ಪಟೇಲ್‌, ನ್ಯಾಯಮೂರ್ತಿ ಪ್ರತೀಕ್‌ ಜಲನ್‌ ಅವರ ಪೀಠವು ತಿಳಿಸಿದೆ.

ಜುಲೈ 9ರಂದು ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಚೆನ್ನೈ ವಿಮಾನ ನಿಲ್ದಾಣದಿಂದ ಮಾತ್ರ ಹೂವುಗಳನ್ನು ಆಮದು ಮಾಡಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಣ್ಣು, ಹೂವು ಮತ್ತು ತರಕಾರಿ ವ್ಯಾಪಾರಿಗಳ ಸಂಘವು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ.

ADVERTISEMENT

‘ನಾವು ನ್ಯಾಯಾಲಯದ ಮೊರೆ ಹೋಗುವ ಮುನ್ನ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೆವು . ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಸಂಘದ ಸದಸ್ಯರು ತಿಳಿಸಿದರು.

ನ್ಯಾಯಾಲಯದ ಆದೇಶದ ‍ಪ್ರತಿ ದೊರೆತ ಎಂಟು ವಾರಗಳೊಳಗೆ ಸಂಘದ ಮನವಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.