ADVERTISEMENT

ತ್ರಿಪುರಾ: ಸಿಪಿಎಂ– ಬಿಜೆಪಿ ಕಾರ್ಯಕರ್ತರ ಘರ್ಷಣೆ, ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 14:52 IST
Last Updated 30 ನವೆಂಬರ್ 2022, 14:52 IST

ಗುವಾಹಟಿ: 2018ರಿಂದ ಮುಚ್ಚಲಾಗಿದ್ದ ಪಕ್ಷದ ಕಚೇರಿಯನ್ನು ಪುನಃ ತೆರೆಯಲು ಮುಂದಾದ ಸಿಪಿಎಂ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು ಸಿಪಿಎಂ ಕಾರ್ಯಕರ್ತ ಶಾಹಿದ್‌ ಖಾನ್‌ ಮೃತಪಟ್ಟಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.

‘ಸಿಪಾಯಿಜಲ ಜಿಲ್ಲೆಯ ಚಾರಿಲಂ ವಿಧಾನಸಭಾ ಕ್ಷೇತ್ರದಲ್ಲಿರುವ ಪಕ್ಷದ ಕಚೇರಿಯನ್ನು ಪುನಃ ತೆರೆಯುವ ಸಂಬಂಧ ಪೊಲೀಸರ ಅನುಮತಿಯೊಂದಿಗೆ ನಮ್ಮ ಕಾರ್ಯಕರ್ತರು ಕಚೇರಿ ಮುಂಭಾಗ ಸೇರಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ನಮ್ಮ ಕಾರ್ಯಕರ್ತ ಮೇಲೆ ಕಲ್ಲು ಹಾಗೂ ಗಾಜಿನ ಬಾಟಲಿಗಳನ್ನು ತೂರಿದರು, ಕೋಲುಗಳಿಂದ ದಾಳಿ ನಡೆಸಿದರು’ ಎಂದು ಸಿಪಿಎಂನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಚೌಧರಿ ದೂರಿದ್ದಾರೆ.

ಉಪ ಮುಖ್ಯಮಂತ್ರಿ ಜಿಷ್ನು ದೇವ್‌ ವರ್ಮಾ ಅವರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ‘ಚಾರಿಲಂ ಶಾಂತಿಪ್ರಿಯ ಪ್ರದೇಶವಾಗಿದ್ದು, ಇಲ್ಲಿನ ಶಾಂತಿಯನ್ನು ಕದಡಲು ಸಿಪಿಎಂ ಕಾರ್ಯಕರ್ತರು ಯತ್ನಿಸುತ್ತಿದ್ದರು. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ’ ಎಂದರು.

ADVERTISEMENT

ತ್ರಿ‍‍ಪುರಾದಲ್ಲಿ 2023ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.