
ಲಖನೌ: ಹಾಲಿಗೆ ನೀರು ಬೆರೆಸಿ ಮಾರಾಟ ಮಾಡಿರುವುದರ ಬಗ್ಗೆ ಕೇಳಿರುತ್ತೀರಿ. ಉತ್ತರ ಪ್ರದೇಶದ ಶಾಲೆಯೊಂದರಲ್ಲಿ, ಅಡುಗೆ ಸಿಬ್ಬಂದಿ 1 ಲೀಟರ್ ಹಾಲನ್ನು ಒಂದು ಬಕೆಟ್ ನೀರಿಗೆ ಬೆರೆಸಿ, ಅದನ್ನು 50 ಮಕ್ಕಳಿಗೆ ವಿತರಿಸಿದ್ದಾರೆ.
ನೀರು ತುಂಬಿದ್ದ ಬಕೆಟ್‌ಗೆ ಅರ್ಧ ಲೀಟರ್‌ನ ಎರಡು ಪ್ಯಾಕೆಟ್ ಹಾಲನ್ನು ಸುರಿದು, ಅದನ್ನು ಕದಡಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಹೊಬಾ ಜಿಲ್ಲೆಯ, ಕಬ್ರೈ ಬ್ಲಾಕ್‌ನ ಧಿಕ್ವಾಹ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ.
‘ಮಧ್ಯಾಹ್ನದ ಬಿಸಿಯೂಟದ ವೇಳೆ, ಶಾಲೆಯ ಪ್ರಾಂಶುಪಾಲರೇ ‘ಮಕ್ಕಳೇ ಹಾಲು ಕುಡಿಯಲು ಬನ್ನಿ‘ ಎಂದು ಕೂಗುತ್ತಿರುವುದು, ಅಡುಗೆ ಸಿಬ್ಬಂದಿ ಹಾಲನ್ನು ನೀರಿನಲ್ಲಿ ಬೆರೆಸಿ ಮಕ್ಕಳಿಗೆ ಕುಡಿಯಲು ವಿತರಿಸುತ್ತಿರುವುದು ವಿಡಿಯೊದಲ್ಲಿದೆ.
ಘಟನೆಯ ಬೆನ್ನಲ್ಲೇ, ಮಹೊಬಾ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರಾದ ಮೋನಿಕಾ ಸೋನಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
‘ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಪ್ರಾಂಶುಪಾಲರು, ‘ನೀರಿನಲ್ಲಿ ಹಾಲು ಬೆರೆಸಿ ಮಕ್ಕಳಿಗೆ ವಿತರಿಸುವಂತೆ ನಾನು ಸೂಚಿಸಿಲ್ಲ, ಅಡುಗೆ ಸಿಬ್ಬಂದಿ ತಮಗೆ ತೋಚಿದಂತೆ ಮಾಡಿದ್ದಾರೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.