ADVERTISEMENT

ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ವರದಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 9:22 IST
Last Updated 12 ಡಿಸೆಂಬರ್ 2024, 9:22 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಬಿಜೆಪಿಯ ‍‍‍ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿರುವ ‘ಒಂದು ರಾಷ್ಟ್ರ–ಒಂದು ಚುನಾವಣೆ’ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ಸೇರಿದಂತೆ ಎರಡು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. 

ADVERTISEMENT

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲೇ ಮುಂದಿನ ವಾರ ಈ ಮಸೂದೆಗಳನ್ನು ಮಂಡಿಸುವ ಸಂಭವ ಇದೆ. ಬಳಿಕ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಶಿಫಾರಸು ಮಾಡಲಾಗುತ್ತದೆ.

ಈ ಮಸೂದೆಗಳ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಲು ಸರ್ಕಾರ ಉತ್ಸುಕವಾಗಿದೆ. ಸಮಿತಿಯ ಮೂಲಕ ವಿವಿಧ ರಾಜ್ಯಗಳ ವಿಧಾನಸಭೆಗಳ ಸ್ಪೀಕರ್‌ಗಳೊಂದಿಗೆ ಸಮಾಲೋಚಿಸಲು ಸರ್ಕಾರ ಬಯಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. 

‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಿಜೆಪಿಯ ಪ್ರಮುಖ ಕಾರ್ಯಸೂಚಿಯಾಗಿದ್ದು, 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಅದರ ಜಾರಿಗೆ ಚಿಂತನೆ ನಡೆಸುತ್ತಿದ್ದರು. ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ನೇಮಿಸಿತ್ತು.

ಸಮಿತಿಯು ಒಟ್ಟಿಗೆ ಚುನಾವಣೆ ನಡೆಸುವ ಸಂಬಂಧ 62 ‍ಪಕ್ಷಗಳ ಅಭಿಪ್ರಾಯ ಕೇಳಿತ್ತು. 47 ಪಕ್ಷಗಳ ಪರವಾಗಿ ಅಭಿಪ್ರಾಯ ನೀಡಿದರೆ, 15 ಪಕ್ಷಗಳು ಪ್ರಸ್ತಾವ ವಿರೋಧಿಸಿದ್ದವು. ಸಮಿತಿಯು ಮಾರ್ಚ್‌ನಲ್ಲಿ 18,626 ಪುಟಗಳ ವರದಿ ಸಲ್ಲಿಸಿತ್ತು. ಸಂವಿಧಾನಕ್ಕೆ 18 ತಿದ್ದುಪಡಿಗಳನ್ನು ಸಮಿತಿ ಶಿಫಾರಸು ಮಾಡಿತ್ತು. ಈ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಸೆಪ್ಟೆಂಬರ್ ತಿಂಗಳಲ್ಲಿ ಅಂಗೀಕರಿಸಿತ್ತು.       

ಸದ್ಯಕ್ಕೆ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಮಾತ್ರ ಏಕಕಾಲದಲ್ಲಿ ಚುನಾವಣೆ ನಡೆಸುವ ಕರಡು ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಬಿಜೆಪಿಯ ಮತ್ತೊಂದು ‘ಕಾರ್ಯಸೂಚಿ’ಯನ್ನು ಕಾರ್ಯಗತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರ ಮುಂದಡಿ ಇಟ್ಟಿದೆ. 

ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ಜತೆಗೆ ಪುರಸಭೆ ಹಾಗೂ ಪಂಚಾಯಿತಿಗಳ ಚುನಾವಣೆಗಳನ್ನು ಹಂತ ಹಂತವಾಗಿ ನಡೆಸಲು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಶೇ 50ರಷ್ಟು ವಿಧಾನಸಭೆಗಳ ಒಪ್ಪಿಗೆ ಅಗತ್ಯ ಇತ್ತು. 

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಅನುಮೋದನೆ ಅಗತ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.