ಸಂಸತ್ ಭವನ
ಪಿಟಿಐ ಚಿತ್ರ
ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಎಸ್.ಕೆಹರ್ ಅವರು 'ಒಂದು ರಾಷ್ಟ್ರ ಒಂದು ಚುನಾವಣೆ'ಯನ್ನು ಪ್ರಸ್ತಾಪಿಸುವ ಮಸೂದೆಗಳನ್ನು ಪರಿಶೀಲಿಸುವ ಸಂಸದೀಯ ಸಮಿತಿ ಎದುರು ಹಾಜರಾಗಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಲೋಕಸಭೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಂಡನೆಯಾಗಿರುವ ಸಂವಿಧಾನ (129ನೇ ತಿದ್ದುಪಡಿ) ಮಸೂದೆ – 2024 ಹಾಗೂ ಅದಕ್ಕೆ ಪೂರಕವಾಗಿ ಮಂಡಿಸಲಾಗಿರುವ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ – 2024 ಅನ್ನು 39 ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸುತ್ತಿದೆ.
ಈ ಸಮಿತಿಯ ಮುಂದಿನ ಸಭೆಯು ಜುಲೈ 11ಕ್ಕೆ ನಿಗದಿಯಾಗಿದ್ದು, ಸಮಿತಿ ಸದಸ್ಯರು ನಿವೃತ್ತ ಮುಖ್ಯನ್ಯಾಯಮೂರ್ತಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅವರಷ್ಟೇ ಅಲ್ಲದೆ, ಹಿರಿಯ ವಕೀಲರು, ರಾಜ್ಯಸಭೆಯ ಮಾಜಿ ಸದಸ್ಯ ಇ.ಎಂ. ಸುದರ್ಶನ ನಾಚಿಪ್ಪನ್, ಕೇಂದ್ರದ ಮಾಜಿ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯಿಲಿ ಅವರೂ ಸಮಿತಿ ಎದುರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸಂಸದ ಪಿ.ಪಿ. ಚೌಧರಿ ನೇತೃತ್ವದ ಸಮಿತಿಯ ಅವಧಿಯನ್ನು ಸಂಸತ್ತಿನ ಮಳೆಗಾಲದ ಅಧಿವೇಶನದ ಕೊನೇ ವಾರದ ಮೊದಲ ದಿನದವರೆಗೆ ವಿಸ್ತರಿಸಲಾಗಿದೆ.
ಆಗಾಗ್ಗೆ ಚುನಾವಣೆಗಳನ್ನು ನಡೆಸುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗಲಿದೆ. ಹಾಗಾಗಿ, ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಉತ್ತಮ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, 'ಒಂದು ರಾಷ್ಟ್ರ ಒಂದು ಚುನಾವಣೆ' ಯೋಜನೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಹಾಗೂ ಅಸಾಂವಿಧಾನಿಕ ನಡೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.