ADVERTISEMENT

ಮೂರು ವರ್ಷಗಳ ಹಿಂದೆ ವಿಷವುಣಿಸಿ ಕೊಲೆಗೆ ಯತ್ನ: ಇಸ್ರೋ ವಿಜ್ಞಾನಿ

ಪಿಟಿಐ
Published 6 ಜನವರಿ 2021, 5:23 IST
Last Updated 6 ಜನವರಿ 2021, 5:23 IST
ಇಸ್ರೋ ರಾಕೆಟ್ ಉಡಾವಣೆ (ಸಾಂದರ್ಭಿಕ ಚಿತ್ರ)
ಇಸ್ರೋ ರಾಕೆಟ್ ಉಡಾವಣೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಮೂರು ವರ್ಷಗಳ ಹಿಂದೆ ವಿಷವುಣಿಸಿ ತಮ್ಮನ್ನು ಕೊಲೆ ಮಾಡುವ ಯತ್ನ ನಡೆಸಲಾಗಿತ್ತು ಎಂಬ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಹಿರಿಯ ವಿಜ್ಞಾನಿಯ ಹೇಳಿಕೆ ಭಾರಿ ವಿವಾದವನ್ನು ಹುಟ್ಟು ಹಾಕಿದೆ.

ತಪನ್ ಮಿಶ್ರಾ ಎಂಬ ವಿಜ್ಞಾನಿ ಗಂಭೀರ ಆರೋಪ ಮಾಡಿದ್ದು, 2017 ಮೇ 23ರಂದು ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಪ್ರಚಾರ ಸಂದರ್ಶನದಲ್ಲಿ ಮಾರಣಾಂತಿಕ ಆರ್ಸೆನಿಕ್ ಟ್ರೈ ಆಕ್ಸೆೈಡ್‌ ನೀಡಿ ಕೊಲೆ ಯತ್ನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

ವಿಷವನ್ನು ಬಹುಶಃ ದೋಸೆ, ಚಟ್ನಿ ಹಾಗೂ ಊಟದ ಬಳಿಕದ ಸ್ನ್ಯಾಕ್‌ಗಳಲ್ಲಿ ಬೆರೆಸಿರಬಹುದು ಎಂದು ಇಸ್ರೋದಲ್ಲಿ ಹಿರಿಯ ಸಲಹೆಗಾರನಾಗಿ ದುಡಿಯುತ್ತಿರುವ ಹಾಗೂ ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಮಿಶ್ರಾ ತಿಳಿಸಿದರು.

ADVERTISEMENT

ಈ ಹಿಂದೆ ಅವರು ಅಹಮದಾಬಾದ್ ಮೂಲದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಪ್ಲಿಕೇಷನ್ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಫೇಸ್‌ಬುಕ್‌ನಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. 'ಲಾಂಗ್ ಕೆಪ್ಟ್ ಸೀಕ್ರೆಟ್' ಎಂಬ ಶೀರ್ಷಿಕೆಯೊಂದಿಗೆ ಮಿಶ್ರಾ ರಹಸ್ಯವನ್ನು ಬಹಿರಂಗಪಡಿಸಿದ್ದು, 2017ರಲ್ಲಿ ಗೃಹ ವ್ಯವಹಾರಗಳ ಭದ್ರತಾ ಸಿಬ್ಬಂದಿ ಭೇಟಿಯಾಗಿ ಆರ್ಸೆನಿಕ್ ವಿಷವುಣಿಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಬಳಿಕ ವೈದ್ಯರೂ ನೆರವಾಗಿದ್ದರು ಎಂದು ಬರೆದಿದ್ದಾರೆ.

ವಿಷಪ್ರಾಸನದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಕಾಡಿರುವುದಾಗಿ ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಚರ್ಮದಲ್ಲಿ ಸೋಂಕು, ಶಿಲಿಂಧ್ರಗಳ ಸೋಂಕು ಉಂಟಾಗಿರುವುದಾಗಿ ಮಿಶ್ರಾ ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ದಿಲ್ಲಿ ಏಮ್ಸ್ ವೈದ್ಯಕೀಯ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಎಲ್ಲ ಘಟನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿನ ಪರಿಣಿತಿಯಂತೆ ಬಹುದೊಡ್ಡ ಮಿಲಿಟರಿ ಮತ್ತು ವಾಣಿಜ್ಯ ಕೊಡುಗೆ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಂತೆ ಬೇಹುಗಾರಿಕಾ ದಾಳಿಯಾಗಿರಬಹುದು ಎಂದು ಆರೋಪಿಸಿದರು.

ಆದರೆ ಮಿಶ್ರಾ ಹೇಳಿಕೆಗೆ ಇಸ್ರೋ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.