ADVERTISEMENT

ಬಾರ್ಜ್‌ ದುರಂತಕ್ಕೆ ಒಎನ್‌ಜಿಸಿ ನಿರ್ಲಕ್ಷ್ಯವೇ ಕಾರಣ: ಶಿವಸೇನಾ

ಪಿಟಿಐ
Published 22 ಮೇ 2021, 9:29 IST
Last Updated 22 ಮೇ 2021, 9:29 IST
ಶಿವಸೇನಾ
ಶಿವಸೇನಾ   

ಮುಂಬೈ: ‘ಬಾರ್ಜ್‌ ದುರಂತಕ್ಕೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿರ್ಲಕ್ಷ್ಯವೇ ಕಾರಣ. ಈ ದುರಂತದ ನೈತಿಕ ಹೊಣೆ ಹೊತ್ತು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಲು ಸಿದ್ಧರಿದ್ದಾರೆಯೇ’ ಎಂದು ಶಿವಸೇನಾ ಪ್ರಶ್ನಿಸಿದೆ.

‘ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಬಾರ್ಜ್‌ ಮುಳುಗಡೆಯಾಗಿ ಹಲವಾರು ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ಸಾವುಗಳು ನೈಸರ್ಗಿಕ ವಿಕೋಪದಿಂದ ಸಂಭವಿಸಿಲ್ಲ. ಬದಲಾಗಿ ಚಂಡಮಾರುತದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ನಡೆದ ಹತ್ಯೆ’ ಎಂದು ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ.

‘ಚಂಡಮಾರುತ ಕುರಿತುಮುಂಚಿತವಾಗಿಯೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಒಎನ್‌ಜಿಸಿ ಇದನ್ನು ನಿರ್ಲಕ್ಷ್ಯಿಸಿದ ಕಾರಣ ಹಲವಾರು ಜನರು ಮೃತಪಡುವಂತಾಯಿತು. ಇನ್ನೂ 26 ಜನರು ನಾಪತ್ತೆಯಾಗಿದ್ದಾರೆ’ ಎಂದು ಶಿವಸೇನಾ ಹೇಳಿದೆ.

ADVERTISEMENT

‘ಒಂದು ವೇಳೆ ಭಾರತೀಯ ನೌಕಾ‍ಪಡೆ ಮತ್ತು ಕರಾವಳಿ ಪಡೆ ಶೋಧ ಕಾರ್ಯಾಚರಣೆ ಆರಂಭಿಸದಿದ್ದಲ್ಲಿ ಎಲ್ಲಾ ಸಿಬ್ಬಂದಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಈ ಕಾರ್ಮಿಕರು ಖಾಸಗಿ ಸಂಸ್ಥೆಗಳಿಗೆ ಸೇರಿದ್ದವರು ಆಗಿರಬಹುದು. ಆದರೆ ಅವರೆಲ್ಲರೂ ಒಎನ್‌ಜಿಸಿಗಾಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳು ಚಂಡಮಾರುತಕ್ಕಾಗಿ ಸಿದ್ಧತೆಗಳನ್ನು ಮಾಡುತ್ತಿದ್ದರೂ ಒಎನ್‌ಜಿಸಿ ಮಾತ್ರ ಚಂಡಮಾರುತ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದುಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಒಎನ್‌ಜಿಸಿ ‘ನವರತ್ನ’ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಇದರ ಖಾಸಗೀಕರಣದ ಪ್ರಕ್ರಿಯೆ ಪ್ರಾರಂಭವಾಗಿದೆ. ಪೆಟ್ರೋಲಿಯಂ ಕಂಪನಿಗಳು ಪಿಎಂ ಕೇರ್ಸ್‌ ನಿಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿವೆ. ಆದರೆ ಕಂಪನಿಗಳು ತನ್ನ ಕಾರ್ಮಿಕರನ್ನು ರಕ್ಷಿಸುವಲ್ಲಿ ವಿಫಲವಾಗಿವೆ. ಅಮಾಯಕರ ಸಾವಿನ ಹೊಣೆ ಹೊತ್ತು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡುತ್ತಾರೆಯೇ’ ಎಂದು ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.