
ಇ.ಡಿ
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಆನ್‌ಲೈನ್ ಗೇಮಿಂಗ್ ವೇದಿಕೆಗಳಾದ ವಿಂಝೋ (WinZO) ಹಾಗೂ ಗೇಮ್ಸ್‌ಕ್ರಾಫ್ಟ್‌ಗೆ (Gamezkraft) ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಂಗಳೂರಿನ ಐದು, ದೆಹಲಿಯ ನಾಲ್ಕು ಹಾಗೂ ಗುರುಗ್ರಾಮದ ಎರಡು ಕಡೆ ಸೇರಿ ಒಟ್ಟು 11 ಕಡೆ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಂಝೋ ಆ್ಯಪ್ ಹಾಗೂ ಗೇಮ್ಸ್‌ಕ್ರಾಫ್ಟ್ (pocket52.com) ಎನ್ನುವ ಎರಡು ಆನ್‌ಲೈನ್ ಗೇಮಿಂಗ್ ಕಂಪನಿಗಳ ಮೇಲೆ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ಬಯಸಿ ಈ ಕಂಪನಿಗಳನ್ನು ಸಂಪರ್ಕಿಸುವ ಪ್ರಯತ್ನ ಕೈಗೂಡಲಿಲ್ಲ.
ಈ ಎರಡು ಗೇಮಿಂಗ್ ಕಂಪನಿಗಳ ಕಚೇರಿ, ಸಿಒಒ, ಸಿಒಒ ಹಾಗೂ ಸಿಎಫ್ಒಗಳ ಮನೆಗಳ ಮೇಲೂ ದಾಳಿ ನಡೆದಿದೆ.
ಆ್ಯಪ್‌ನ ‘ಅಲ್ಗೋರಿಥಂ’ ಅನ್ನು ತಿರುಚಿ ಬಳಕೆದಾರರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ಆ್ಯಪ್‌ನ ಪ್ರವರ್ತಕರು ಕ್ರಿಪ್ಟೊ ವ್ಯಾಲೆಟ್ ಮೂಲಕ ಹಣ ವಂಚನೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೊಸ ಕಾನೂನು ಜಾರಿ ಮಾಡುವ ಮೂಲಕ ಆನ್‌ಲೈನ್ ಜೂಜು ನಿಷೇಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.