
ನವದೆಹಲಿ: ಸಾಮಾಜಿಕ ಹಾಗೂ ಇ-ಸ್ಪೋರ್ಟ್ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆನ್ ಲೈನ್ ಜೂಜು ಹಾಗೂ ಬೆಟ್ಟಿಂಗ್ ವೇದಿಕೆಗಳನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಪಿಎಐಎಲ್ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ನೆರವು ಕೇಳಿದೆ.
ಕೇಂದ್ರ ಸರ್ಕಾರದ ವಕೀಲರಿಗೂ ಪಿಐಎಲ್ ನ ಪ್ರತಿ ನೀಡಿ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲರಿಗೆ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲ ಹಾಗೂ ಕೆ.ವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಸೂಚಿಸಿತು.
‘ಮುಂದಿನ ವಿಚಾರಣೆ ವೇಳೆ ಈ ಪ್ರಕರಣದ ಬಗ್ಗೆ ನಮಗೆ ನೆರವು ನೀಡಿ’ ಎಂದು ಕೇಂದ್ರದ ಪರವಾಗಿ ಹಾಜರಿದ್ದ ವಕೀಲ ವಿ.ಸಿ ಭಾರತಿ ಅವರನ್ನು ಕೋರಿದ ನ್ಯಾಯಪೀಠವು, ಎರಡು ವಾರಗಳ ಬಳಿಕ ವಿಚಾರಣೆಗೆ ಗೊತ್ತುಪಡಿಸಿ ಎಂದು ಸೂಚಿಸಿತು.
‘ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಅಕೌಂಟಬಿಲಿಟಿ ಆ್ಯಂಡ್ ಸಿಸ್ಟಮೆಟಿಕ್ ಚೇಂಜ್’ (ಸಿಎಎಸ್ ಸಿ) ಎನ್ನುವ ಸಂಸ್ಥೆ ಈ ಅರ್ಜಿಯನ್ನು ಸಲ್ಲಿಸಿತ್ತು.
ನೋಂದಣಿ ಮಾಡದ ಆ್ಯಪ್ ಗಳಲ್ಲಿ ಹಣಕಾಸು ವ್ಯವಹಾರಗಳಿಗೆ ಅನುಮತಿ ನೀಡಬಾರದು ಎಂದು ಆರ್ ಬಿಐ, ಎನ್ ಸಿಪಿಐ ಹಾಗೂ ಯುಪಿಐ ವೇದಿಕೆಗಳಿಗೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ಭಿನ್ನವಿಸಲಾಗಿದೆ.
₹ 2 ಲಕ್ಷ ಕೋಟಿಗೂ ಅಧಿಕ ತೆರಿಗೆ ವಂಚನೆ ಶಂಕೆ ಇರುವುದರಿಂದ ಅವುಗಳಿಂದ ತೆರಿಗೆ ವಸೂಲಿ ಹಾಗೂ ಇಂಟರ್ ಪೋಲ್, ಸಿಬಿಐ ಹಾಗೂ ಇ.ಡಿಯಿಂದ ತನಿಖೆ ನಡೆಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಕೇಂದ್ರ ಸಚಿವಾಲಯಗಳು ಹಾಗೂ ಆ್ಯಪ್ ಸ್ಟೋರ್ ಸೇವೆ ಒದಗಿಸುವ ಆ್ಯಪಲ್ ಹಾಗೂ ಗೂಗಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸೇರಿ ಆರು ಪಕ್ಷಗಾರರನ್ನು ಅರ್ಜಿದಾರರು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.
ಬೆಟ್ಟಿಂಗ್ ಹಾಗೂ ಜೂಜು ಆ್ಯಪ್ ಗಳು ದೇಶದಾದ್ಯಂತ ಸಾಮಾಜಿಕ ಹಾಗೂ ಆರ್ಥಿಕ ಹಾನಿಯನ್ನುಂಟು ಮಾಡುತ್ತಿವೆ. ಹೀಗಾಗಿ ಇವುಗಳಿಗೆ ಮೂಗುದಾರ ಹಾಕಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.