ಚಂದ್ರಬಾಬು ನಾಯ್ಡು
– ಪಿಟಿಐ
ಅಮರಾವತಿ: ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಜನರು ಮಾತ್ರ ಪ್ರಪಂಚದಾದ್ಯಂತ ಯಶಸ್ವಿಯಾಗಿದ್ದಾರೆ. ಇಂಗ್ಲಿಷ್ ಭಾಷೆ ಮಾತ್ರ ಜ್ಞಾನವನ್ನು ಖಾತರಿಪಡಿಸುತ್ತದೆ ಎಂಬ ತಪ್ಪು ಕಲ್ಪನೆ ಪ್ರಚಲಿತವಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ವಿಧಾನಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ಭಾಷೆ ಸಂವಹನಕ್ಕಾಗಿ ಮಾತ್ರ. ಜ್ಞಾನವು ಭಾಷೆಯೊಂದಿಗೆ ಬರುವುದಿಲ್ಲ. ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಜನರು ಮಾತ್ರ ಪ್ರಪಂಚದಾದ್ಯಂತ ಯಶಸ್ವಿಯಾಗಿದ್ದಾರೆ. ಮಾತೃಭಾಷೆಯ ಮೂಲಕ ಕಲಿಯುವುದು ಸುಲಭ’ ಎಂದು ತಿಳಿಸಿದ್ದಾರೆ.
‘ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಭಾಷೆ ಇರುವುದು ದ್ವೇಷಿಸಲು ಅಲ್ಲ. ಇಲ್ಲಿ (ಆಂಧ್ರಪ್ರದೇಶ) ಮಾತೃಭಾಷೆ ತೆಲುಗು. ರಾಷ್ಟ್ರೀಯ ಭಾಷೆ ಹಿಂದಿ ಮತ್ತು ಅಂತರರಾಷ್ಟ್ರೀಯ ಭಾಷೆ ಇಂಗ್ಲಿಷ್’ ಎಂದು ನಾಯ್ಡು ಹೇಳಿದ್ದಾರೆ.
ಮಾತೃಭಾಷೆಯನ್ನು ಮರೆಯದೆ ಜೀವನೋಪಾಯಕ್ಕಾಗಿ ಸಾಧ್ಯವಾದಷ್ಟು ಇತರ ಭಾಷೆಗಳನ್ನು ಕಲಿಯುವುದು ಮುಖ್ಯ. ಹಿಂದಿ ಕಲಿಯುವುದರಿಂದ ದೆಹಲಿಯಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಪಾನ್ ಮತ್ತು ಜರ್ಮನಿಯಂತಹ ಇತರ ದೇಶಗಳಿಗೆ ಅನೇಕ ಜನರು ಹೋಗುತ್ತಿರುವುದರಿಂದ, ಆ ಭಾಷೆಗಳನ್ನು ಇಲ್ಲಿಯೂ ಕಲಿಯಲು ಸಾಧ್ಯವಾದರೆ, ಜನರು ಆ ವಿದೇಶಿ ತಾಣಗಳಿಗೆ ಭೇಟಿ ನೀಡಿದಾಗ ತುಂಬಾ ಸಹಾಯಕವಾಗುತ್ತದೆ. ಆದ್ದರಿಂದ, ‘ಭಾಷೆಗಳ ಮೇಲೆ ಅನಗತ್ಯ ರಾಜಕೀಯ’ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯುವಂತೆ ನಾಯ್ಡು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.