ADVERTISEMENT

ದ್ವೇಷ ಭಾಷಣದ ವಿರುದ್ಧ ‘ಸುಪ್ರೀಂ’ಗೆ ಮೊರೆ

ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಮುಖ್ಯ ನ್ಯಾಯಮೂರ್ತಿ ರಮಣಗೆ ವಕೀಲರ ಮನವಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 19:41 IST
Last Updated 27 ಡಿಸೆಂಬರ್ 2021, 19:41 IST
   

ನವದೆಹಲಿ: ‘ಜನಾಂಗೀಯ ಶುದ್ಧೀಕರಣಕ್ಕಾಗಿ ಮುಸ್ಲಿಮರ ನರಮೇಧ ನಡೆಸಬೇಕು’ ಎಂದು ಕರೆ ಕೊಟ್ಟಿದ್ದ ‘ದ್ವೇಷ ಭಾಷಣ’ದ ವಿರುದ್ಧ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ಕೆಲವು ಹಿರಿಯ ವಕೀಲರು ಸೇರಿದಂತೆ ವಕೀಲರ ಗುಂಪೊಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಮನವಿ ಕೊಟ್ಟಿದೆ.

ಈ ರೀತಿಯಲ್ಲಿ ಮಾತನಾಡುವುದೇ ಸರಿ ಎಂಬ ಸನ್ನಿವೇಶ ಈಗ ನಿರ್ಮಾಣ ಆಗಿದೆ. ಹಾಗಾಗಿ, ಹೀಗೆ ಮಾತನಾಡುವುದನ್ನು ತಡೆಯುವುದಕ್ಕೆ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್‌, ಪಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್‌, ಹಿರಿಯ ವಕೀಲರಾದ ದುಷ್ಯಂತ ದವೆ, ಪ್ರಶಾಂತ್‌ ಭೂಷಣ್‌, ಬಸವ ಪಿ. ಪಾಟೀಲ ಮತ್ತು ಇತರರು ಈ ಪತ್ರ ಬರೆದಿದ್ದಾರೆ. ಹಿಂದೂ ಯುವ ವಾಹಿನಿ ಸಂಘಟನೆಯು ದೆಹಲಿ ಮತ್ತು ಹರಿದ್ವಾರದಲ್ಲಿ ಕ್ರಮವಾಗಿ ಇದೇ 17 ಮತ್ತು 19ರಂದು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ‘ದ್ವೇಷ ಭಾಷಣ’ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇಂತಹ ಭಾಷಣ ಮಾಡಿದವರ ಮೇಲೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ADVERTISEMENT

ಇಂತಹ ಭಾಷಣಗಳು ದೇಶದ ಏಕತೆ ಮತ್ತು ಸಮಗ್ರತೆಗೆ ಬಹುದೊಡ್ಡ ಬೆದರಿಕೆ. ಅದಲ್ಲದೆ, ಈ ದೇಶದಲ್ಲಿರುವ ಲಕ್ಷಾಂತರ ಮುಸ್ಲಿಂ ಪೌರರ ಜೀವಕ್ಕೂ ಅಪಾಯ ಎದುರಾಗಬಹುದು. ಇಂತಹ ಭಾಷಣಗಳ ಸರಣಿಯೇ ನಡೆದಿದೆ. ಆ ಸರಣಿಗೆ ದೆಹಲಿ ಮತ್ತು ಹರಿದ್ವಾರದ ಭಾಷಣಗಳು ಇತ್ತೀಚಿನ ಸೇರ್ಪ‍ಡೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಹಿಂದೆ ಇಂತಹ ಭಾಷಣ ಮಾಡಿದ್ದ ಸಂದರ್ಭದಲ್ಲಿಯೂ ಭಾಷಣ ಮಾಡಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ ಎಂಬುದನ್ನು ಪತ್ರದಲ್ಲಿ ನೆನಪಿಸಲಾಗಿದೆ.

ದೇಶದ ನ್ಯಾಯಾಂಗದ ಮುಖ್ಯಸ್ಥ ಎಂಬ ಅಧಿಕಾರ ಉಪಯೋಗಿಸಿ ಮುಖ್ಯ ನ್ಯಾಯಮೂರ್ತಿ ಅವರು ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿಂದ ಪತ್ರ ಬರೆಯಲಾಗಿದೆ ಎಂದು ವಕೀಲ ಇಜಾಸ್‌ ಮಕ್ಬೂಲ್‌ ಹೇಳಿದ್ದಾರೆ. ಅದಲ್ಲದೆ, ಬಹುಸಂಸ್ಕೃತಿಯ ದೇಶದ ಕಾರ್ಯನಿರ್ವಹಣೆಗೆ ನ್ಯಾಯಾಂಗದ ಸ್ವಾತಂತ್ರ್ಯ, ಸಾಂಸ್ಥಿಕ ಮೌಲ್ಯಗಳ ರಕ್ಷಣೆ ಮೂಲಭೂತವಾದುದು ಎಂದು ಅವರು ನಂಬಿದ್ದಾರೆ ಎಂದು ಮಕ್ಬೂಲ್‌ ಹೇಳಿದ್ದಾರೆ.

ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸತ್‌’ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಜಿತೇಂದ್ರ ನಾರಾಯಣ ತ್ಯಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಅವರ ಬಂಧನ ಆಗಿಲ್ಲ.

ಸಂತರು ಹೇಳಿದ್ದೇನು?

ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸತ್‌ನಲ್ಲಿ ಸ್ವಾಮೀಜಿಗಳು ಮಾಡಿದ್ದ ಭಾಷಣದ ವಿಡಿಯೊಗಳ ಟ್ವಿಟರ್‌ ಲಿಂಕ್‌ಗಳನ್ನು ವಕೀಲರು ತಮ್ಮ ಪತ್ರದಲ್ಲಿ ಲಗತ್ತಿಸಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಶುದ್ಧೀಕರಣ ಮಾಡಿದಂತೆ ಇಲ್ಲಿಯೂ ಜನಾಂಗೀಯ ಶುದ್ಧೀಕರಣ ಮಾಡಬೇಕು. ಇದಕ್ಕಾಗಿ ಪ್ರತೀ ಹಿಂದೂ ಸಾಯಲು ಮತ್ತು ಸಾಯಿಸಲು ಸಿದ್ಧನಾಗಬೇಕು. ದೇಶದ ಪ್ರತೀ ಹಿಂದೂ, ಪೊಲೀಸರು, ಸೈನಿಕರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕು. ಈ ಮೂಲಕ ಈ ಶುದ್ಧೀಕರಣ ಅಭಿಯಾನದಲ್ಲಿ ಭಾಗಿಯಾಬೇಕು’ ಎಂದು ಸ್ವಾಮಿ ಪ್ರಬೋಧಾನಂದ ಅವರು ಧರ್ಮ ಸಂಸತ್‌ನಲ್ಲಿ ಕರೆ ನೀಡಿದ್ದರು.

‘ನೀವು ಈಗ ಕೇವಲ ಕತ್ತಿಯಿಂದ ಹೋರಾಡಲು ಸಾಧ್ಯವಿಲ್ಲ. ಶತ್ರುವಿನ ಬಳಿ ಇರುವ ಶಸ್ತ್ರಕ್ಕಿಂತಲೂ ಬಲಾಢ್ಯವಾದ ಆಯುಧ ನಿಮ್ಮ ಬಳಿ ಇರಬೇಕು. ನೀವು ಹೊರಗೆ ಹೋಗುವಾಗ ಆಯುಧ ತೆಗೆದುಕೊಂಡು ಹೋಗಿ. ಮನೆಯಲ್ಲೂ ಸದಾ ಒಂದು ಆಯುಧ ಇರಬೇಕು. ಮನೆಗೆ ಯಾರಾದರೂ ನುಗ್ಗಿದರೆ, ಅವರು ಜೀವಂತವಾಗಿ ಹೊರಗೆ ಹೋಗಬಾರದು. ನಿಮ್ಮ ಮೊಬೈಲ್ ಕೇವಲ ₹5,000 ಮೊತ್ತದ್ದಾಗಿರಲಿ, ಆದರೆ ಆಯುಧದ ಬೆಲೆ ಕನಿಷ್ಠ ₹1 ಲಕ್ಷವಾಗಿರಲಿ’ ಎಂದು ಸ್ವಾಮಿ ಸಾಗರ ಸಿಂಧು ಮಹಾರಾಜ್ ಕರೆ ನೀಡಿದ್ದಾರೆ.

‘ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೇ ಪ್ರಾಥಮಿಕ ಹಕ್ಕು ಇರುವುದು ಎಂದು ಹೇಳಿದ್ದರು. ಅದನ್ನು ನಾನು ಓದಿದ್ದೆ. ಆಗ ಸಂಸದನಾಗಿದ್ದು, ಸಂಸತ್ ಭವನದಲ್ಲಿ ಇದ್ದಿದ್ದರೆ ನಾನು ನಾಥೂರಾಮ್ ಗೋಡ್ಸೆಯಾಗುತ್ತಿದ್ದೆ. ಮನಮೋಹನ್ ಸಿಂಗ್ ಎದೆಗೆ ಆರು ಗುಂಡುಗಳನ್ನು ಹಾರಿಸಿ ಕೊಲ್ಲುತ್ತಿದ್ದೆ’ ಎಂದು ಧರಂದಾಸ್ ಮಹಾರಾಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.