ADVERTISEMENT

ಶಾಸಕರ ಖರೀದಿ ಯತ್ನ ಆರೋಪ: ಬಿಆರ್‌ಎಸ್‌–ಬಿಜೆಪಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
   

ಹೈದರಾಬಾದ್‌: ಇಲ್ಲಿ ಬುಧವಾರ ರಾತ್ರಿ ನಡೆಯಿತು ಎನ್ನಲಾದ ಶಾಸಕರ ಖರೀದಿ ಆರೋಪದ ಪ್ರಕರಣವು ಆಡಳಿತಾರೂಢ ಬಿಆರ್‌ಎಸ್‌ (ಭಾರತೀಯ ರಾಷ್ಟ್ರ ಸಮಿತಿ) ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ನೇತೃತ್ವದ ತೆಲಂಗಾಣ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸಿದೆ ಎಂದು ಬಿಆರ್‌ಎಸ್‌ ಆರೋಪಿಸಿದೆ. ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಹೆಸರು
ಕೆಡಿಸುವುದಕ್ಕಾಗಿ ಬಿಆರ್‌ಎಸ್‌ ಈ ಕೆಟ್ಟ ನಾಟಕ ಆಡಿದೆ ಎಂದು ಬಿಜೆಪಿ ಆಪಾದಿಸಿದೆ.

ಫರೀದಾಬಾದ್‌, ತಿರುಪತಿಯ ಇಬ್ಬರು ‘ಸ್ವಾಮೀಜಿಗಳು’ ಮತ್ತು ಹೈದರಾಬಾದ್‌ನ ಉದ್ಯಮಿಯೊಬ್ಬರನ್ನು ಸೈಬರಾಬಾದ್‌ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಭಾರಿ ಮೊತ್ತ ನೀಡುವ ಆಮಿಷವೊಡ್ಡಿ ಬಿಆರ್‌ಎಸ್‌ನ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಈ ಮೂವರು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳಿಗೆ ಬಿಆರ್‌ಎಸ್‌ ಕಾರ್ಯಕರ್ತರು ಮುನುಗೋಡುವಿನಲ್ಲಿಬೆಂಕಿ ಹಚ್ಚಿದ್ದಾರೆ.

ಬಿಆರ್‌ಎಸ್‌ ಶಾಸಕ ರೋಹಿತ್ ರೆಡ್ಡಿ ಅವರು ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ದೆಹಲಿಯ ರಾಮಚಂದ್ರ ಭಾರತಿ ಅಲಿಯಾಸ್‌ ಸತೀಶ್ ಶರ್ಮಾ ಮತ್ತು ಹೈದರಾಬಾದ್‌ನ ಉದ್ಯಮಿ ನಂದಕುಮಾರ್ ಅವರು ತಮ್ಮನ್ನು ಸಂರ್ಪಕಿಸಿ, ಬಿಆರ್‌ಎಸ್‌ ತೊರೆದರೆ ₹100 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಜೊತೆಗೆ, ಉತ್ತಮ ಸ್ಥಾನ, ಕೇಂದ್ರ ಸರ್ಕಾರದ ಕಾಮಗಾರಿ ಗುತ್ತಿಗೆಗಳನ್ನು ಕೊಡಿಸುವುದಾಗಿಯೂ ಹೇಳಿದ್ದರು ಎಂದು ರೋಹಿತ್‌ ರೆಡ್ಡಿ ಪೊಲೀಸರಿಗೆ ತಿಳಿಸಿದ್ದರು.

ಈ ಮೂವರ ಪೈಕಿ ಇಬ್ಬರು ಮಂಗಳವಾರ ಮತ್ತೆ ಸಂಪರ್ಕಿಸಿ, ಮುಂದಿನ ಮಾತುಕತೆಗಾಗಿ ಮೊಯಿನಾಬಾದ್‌ನ ತಮ್ಮ ತೋಟದ ಮನೆಯಲ್ಲಿ ಭೇಟಿ ನಿಗದಿ ಮಾಡಿದ್ದರು. ಇನ್ನೂ ಕೆಲವು ಶಾಸಕರನ್ನು ಬಿಜೆಪಿ ಸೇರುವಂತೆ ಮಾಡಲು ಅವರು ಕೋರಿದ್ದರು. ಹಾಗೆ ಬರುವವರಿಗೆ ತಲಾ ₹50 ಕೋಟಿ ನೀಡುವ ಆಮಿಷವನ್ನೂ ಒಡ್ಡಿದ್ದರು ಎಂದು ರೋಹಿತ್‌ ರೆಡ್ಡಿ ದೂರಿನಲ್ಲಿ ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಇದೆ.

ರೋಹಿತ್‌ ಅವರ ತೋಟದ ಮನೆಗೆ ನುಗ್ಗಿದ ಪೊಲೀಸರು ರಾಮಚಂದ್ರ ಭಾರತಿ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಿಆರ್‌ಎಸ್‌ ಶಾಸಕರಾದ ಗುವ್ವಲ ಬಾಲರಾಜು, ರೇಗಾ ಕಾಂತಾ ರಾವ್‌, ಹರ್ಷವರ್ಧನ ರೆಡ್ಡಿ ಮತ್ತು ರೋಹಿತ್ ಅವರು ಆ ಸಂದರ್ಭದಲ್ಲಿ ತೋಟದ ಮನೆಯಲ್ಲಿ ಇದ್ದರು. ನಗದು ವಶ ಪಡಿಸಿಕೊಂಡಿರುವ ಕುರಿತು ಪೊಲೀಸರು ಏನನ್ನೂ ಹೇಳಿಲ್ಲ.

ಈ ನಾಲ್ವರು ಶಾಸಕರು ಕೆಸಿಆರ್‌ ಅವರ ನಿವಾಸಕ್ಕೆ ಧಾವಿಸಿದ್ದು, ಸರಣಿ ಸಭೆಗಳನ್ನು ನಡೆಸಲಾಗಿದೆ.

‘ಶಾಸಕರಿಗೆ ಲಂಚ ಮತ್ತು ಪೊಲೀಸರ ತಡರಾತ್ರಿ ಕಾರ್ಯಾಚರಣೆ’ ಪ್ರಕರಣವನ್ನು ಕೆಸಿಆರ್‌ ನಿರ್ದೇಶನದಂತೆ ಕಾರ್ಯರೂಪಕ್ಕೆ ತರಲಾಗಿದೆ. ಮುನುಗೋಡು ಉಪಚುನಾವಣೆಯಲ್ಲಿಸೋಲುವ ಭೀತಿಯಿಂದಾಗಿ ಅವರು ಹೀಗೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

‘ನಾಚಿಕೆಯೇ ಇಲ್ಲದೆ ಈ ವಿಚಿತ್ರ ನಾಟಕವನ್ನು ಆಡಲಾಗಿದೆ. ನಗದು ಎಲ್ಲಿ ಹೋಯಿತು? ಹಣವು ಎಲ್ಲಿಂದ ಬಂತು ಪ್ರಗತಿ ಭವನದಿಂದಲೇ (ಕೆಸಿಆರ್‌ ನಿವಾಸ), ತೋಟದ ಮನೆಯಿಂದಲೇ, ಶಾಸಕರಿಂದಲೇ? ಪೊಲೀಸರು ಶಾಸಕರನ್ನು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಕೇಂದ್ರ ಸಚಿವ ಕಿಶನ್‌ ರೆಡ್ಡಿಪ್ರಶ್ನಿಸಿದ್ದಾರೆ.

ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಇದೆ. ಇಂತಹ ಸಂದರ್ಭದಲ್ಲಿ ನಾಲ್ವರು ಶಾಸಕರನ್ನು ಸೆಳೆದುಕೊಂಡು ಏನು ಉಪಯೋಗ ಎಂದು ಸಿಕಂದರಾಬಾದ್‌ ಸಂಸದ ಕಿಶನ್‌ ರೆಡ್ಡಿ ಪ್ರಶ್ನಿಸಿದ್ದಾರೆ.

ಆರೋಪಿಗಳಿಗೆ ಬಿಜೆಪಿ ಜೊತೆ ಯಾವ ಸಂಬಂಧವೂ ಇಲ್ಲ. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅಥವಾ ಸಿಬಿಐಯಿಂದ ಈ ‍ಪ್ರಕರಣದ ತನಿಖೆ ನಡೆಸುತ್ತೇವೆ. ಕೆಸಿಆರ್‌ ಅವರ ಷಡ್ಯಂತ್ರ ಬಯಲಾಗಲಿದೆ ಎಂದು ಕಿಶನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.