ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ
ಕೃಪೆ: ಪಿಟಿಐ
ನವದೆಹಲಿ: ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾಗವಹಿಸಿ 'ಸಾಟಿಯಿಲ್ಲದ ಶೌರ್ಯ' ಪ್ರದರ್ಶಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 16 ಮಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ ಘೋಷಿಸಿದೆ.
ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಹೊಣೆಯನ್ನು ಬಿಎಸ್‌ಎಫ್ ನಿಭಾಯಿಸುತ್ತಿದೆ.
'ಆಪರೇಷನ್ ಸಿಂಧೂರದ ವೇಳೆ ಗಮನಾರ್ಹ, ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ ಗಡಿ ರಕ್ಷಣಾ ಪಡೆಯ 16 ಯೋಧರಿಗೆ ಈ ಸ್ವಾತಂತ್ರ್ಯೋತ್ಸವದಂದು ಶೌರ್ಯ ಪದಕ ನೀಡಲಾಗುತ್ತಿದೆ' ಎಂದು ಬಿಎಸ್‌ಎಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.
'ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿವೆ' ಎಂದೂ ತಿಳಿಸಿದೆ.
ಪದಕ ಘೋಷಣೆಯಾಗಿರುವ ಸಿಬ್ಬಂದಿಯ ಪಟ್ಟಿಯಲ್ಲಿ ಡೆಪ್ಯುಟಿ ಕಮಾಂಡರ್ ಶ್ರೇಣಿಯ ಒಬ್ಬರು, ಇಬ್ಬರು ಸಹಾಯಕ ಕಮಾಂಡರ್‌ಗಳು ಮತ್ತು ಒಬ್ಬರು ಇನ್‌ಸ್ಪೆಕ್ಟರ್ ಇದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಉಗ್ರರು ಗುಂಡಿನ ದಾಳಿ ನಡೆಸಿ, 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿತ್ತು.
ಪದಕ ವಿಜೇತರ ಹೆಸರು ಘೋಷಣೆ
79ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನವಾದ ಗುರುವಾರ, ರಾಷ್ಟ್ರಪತಿ ಪದಕ ಸೇರಿದಂತೆ ವಿವಿಧ ಪದಕ ವಿಜೇತರ ಹೆಸರುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಇದರಲ್ಲಿ 233 ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 758 ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.